ಗೋಣಿಕೊಪ್ಪಲು, ಡಿ.೨೬: ಗೋಣಿಕೊಪ್ಪಲುವಿನಲ್ಲಿ ೧೫ನೇ ವರ್ಷದ ಶ್ವಾನ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಜರುಗಿತು. ೧೬ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಶ್ವಾನ ಪ್ರಿಯರಿಗೆ ಮುದ ನೀಡಿದವು. ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ವಾನ ಪ್ರದರ್ಶನಕ್ಕೆ ಮುಂಜಾನೆಯಿAದಲೇ ಜನರು ಆಗಮಿಸಿದ್ದರು. ಚಾಂಪಿಯ£ ï‌ಶಿಪ್ ಅನ್ನು ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮದ ಕರುಣ್ ಮಂದಣ್ಣ ಅವರ ಡಾಬರ್‌ಮ್ಯಾನ್ ತಳಿಯ ಶ್ವಾನವು ಉತ್ತಮ ಪ್ರದರ್ಶನ ನೀಡುವ ಮೂಲಕ ತನ್ನದಾಗಿಸಿಕೊಂಡಿತು.

ದ್ವಿತೀಯ ಸ್ಥಾನವನ್ನು ಕೇನ್ ಕಾರ್ಸೊ ತಳಿ ಪಡೆದುಕೊಂಡಿತು. ಇದರ ಮಾಲೀಕ ಕೂಡ ಕರುಣ್ ಮಂದಣ್ಣ ಅವರೇ ಆಗಿದ್ದು, ಪ್ರಶಸ್ತಿ ಸ್ವೀಕರಿಸಿದರು. ಮೂರನೇ ಬಹುಮಾನ ಜರ್ಮನ್‌ಶೆಫÀರ್ಡ್ ತಳಿ ತನ್ನದಾಗಿಸಿ ಕೊಂಡಿತು. ಮಾಲೀಕರಾದ ಬೇಗೂರಿನ ಸೌರವ್ ಕಾರ್ಯಪ್ಪ ಪ್ರಶಸ್ತಿ ಪಡೆದರು. ನಾಲ್ಕನೇ ಬಹುಮಾನವನ್ನು ಬೆಲ್ಜಿಯನ್ ಮಲಿನಾಯ್ಸ್ ಪಡೆದುಕೊಂಡಿತು. ಮಾಲೀಕರಾದ ಎ.ಪಿ.ಚಂಗಪ್ಪ ಪ್ರಶಸ್ತಿ ಪಡೆದು ಕೊಂಡರು. ಐದನೇ ಬಹುಮಾನ ಪೊಮೆರೇನಿಯನ್ ತಳಿಯು ತನ್ನದಾಗಿಸಿಕೊಂಡಿದ್ದು, ಮಾಲೀಕ ಜೆ.ಕರುಣ್ ಮಂದಣ್ಣ ಪ್ರಶಸ್ತಿ ಸ್ವೀಕರಿಸಿದರು.

ಕೊಡಗು ಕೆನಲ್ ಕ್ಲಬ್ ಪಾಲಿಬೆಟ್ಟ, ಕರ್ನಾಟಕ ಪಶುವೈದ್ಯರ ಸಂಘದ ಕೊಡಗು ಜಿಲ್ಲಾ

(ಮೊದಲ ಪುಟದಿಂದ) ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪದ ಜಂಟಿ ಆಶ್ರಯದಲ್ಲಿ ಪ್ರದರ್ಶನ ನಡೆಯಿತು. ಕೊಡಗು ಜಿಲ್ಲೆ ಸೇರಿದಂತೆ ಮೈಸೂರು ಹಾಗೂ ಇತರ ಭಾಗಗಳಿಂದ ೯೦ ಸ್ಪರ್ಧಿಗಳು ತಮ್ಮ ಶ್ವಾನಗಳೊಂದಿಗೆ ಆಗಮಿಸಿ ಉತ್ತಮ ಪ್ರದರ್ಶನ ನೀಡಿದರು.

ಲಯನ್ಸ್ ಕ್ಲಬ್ ಪಾಲಿಬೆಟ್ಟ ವತಿಯಿಂದ ಪ್ರದರ್ಶನ ನೀಡಿದ ಶ್ವಾನಗಳಿಗೆ ಉಚಿತವಾಗಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಲಾಯಿತು. ಶ್ವಾನ ಪ್ರಿಯರಿಗೆ ಶ್ವಾನ ಪ್ರದರ್ಶನದಲ್ಲಿ ಉತ್ತಮ ಶ್ವಾನಗಳ ಮರಿಗಳನ್ನು ಮಾರುವ ಮತ್ತು ಖರೀದಿಸುವ ಅವಕಾಶ ಕಲ್ಪಿಸಲಾಗಿತ್ತು. ಶ್ವಾನಗಳ ಪ್ರದರ್ಶನದ ರಿಂಗನ್ನು ಅತ್ತೂರಿನ ಕುಪ್ಪಂಡ ಅಶೋಕ್ ಅಪ್ಪಣ್ಣ ಪ್ರಾಯೋಜಿಸಿದರು. ಗೋಣಿಕೊಪ್ಪಲುವಿನ ಬಾರ್‌ಕೆಂಟ್ ಬೈಟ್ಸ್ ಪೆಟ್ ಶಾಪ್ ವತಿಯಿಂದ ಪ್ರದರ್ಶನ ನೀಡಿದ ಎಲ್ಲಾ ಶ್ವಾನಗಳಿಗೆ ಜಂತು ನಾಶಕ ಔಷಧಿ ಮತ್ತು ಉತ್ತಮ ತಳಿಯ ಶ್ವಾನಗಳಿಗೆ ಬಹುಮಾನ ನೀಡಲಾಯಿತು. ವೀರಾಜಪೇಟೆಯ ಕುಲ್ಲಚಂಡ ಎಂ. ಪೂಣಚ್ಚ ಅವರು ತಮ್ಮ ಮಗಳಾದ ದಿ.ಡಾ. ಕೆ.ಪಿ. ದೇಚಮ್ಮ ಇವರ ಸ್ಮರಣಾರ್ಥ ಪ್ರದರ್ಶನದಲ್ಲಿ ಆಯ್ಕೆಯಾದ ಮೊದಲ ಉತ್ತಮ ೫ ಶ್ವಾನಗಳಿಗೆ ಬಹುಮಾನದ ಟ್ರೋಫಿ ನೀಡಿದರು.

ಕೊಡಗು ಕೆನಲ್ ಕ್ಲಬ್ ಪಾಲಿಬೆಟ್ಟದ ಅಧ್ಯಕ್ಷ ಕೆ.ಎಂ. ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊಡಗಿನಲ್ಲಿ ಬಹಳಷ್ಟು ಜನರು ತಮ್ಮ ಶ್ವಾನಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇಂದು ದೊಡ್ಡ ಪ್ರಮಾಣದಲ್ಲಿ ಶ್ವಾನ ಪ್ರದರ್ಶನ ನಡೆಯುತ್ತಿರುವುದು ಶ್ಲಾಘನೀಯ. ಗೋಣಿಕೊಪ್ಪಲುವಿನಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು. ವಿವಿಧ ತಳಿಗಳನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಮೂಲಕ ಶ್ವಾನ ಪ್ರಿಯರಿಗೆ ವಿಶೇಷವಾದ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಪ್ರತಿ ವರ್ಷವು ಶ್ವಾನ ಪ್ರದರ್ಶನ ನಡೆಯುವಂತಾಗಲಿ ಈ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಪೊನ್ನಣ್ಣ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜು, ಕರ್ನಾಟಕ ಪಶುವೈದ್ಯರ ಸಂಘ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಯ್ಯಪ್ಪ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಿಲ್ಲೆಯ ಉಪನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ, ಕೆ.ವಿ.ಕೆ.ಪ್ರಭಾರ ಮುಖ್ಯಸ್ಥರಾದ ಡಾ. ಪ್ರಭಾಕರ್, ಬೆಂಗಳೂರಿನ ಕರುಣಾ ಪ್ರಾಣಿ ದಯಾ ಸಂಘದ ಅಧ್ಯಕ್ಷ ಡಾ. ಜಯರಾಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ಪಶುವೈದ್ಯರ ಸಂಘದ ಕಾರ್ಯದರ್ಶಿಗಳಾದ ಡಾ.ಶಾಂತೇಶ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಡಾ.ಗಿರೀಶ್, ಡಾ. ರಾಕೇಶ್ ನಿರೂಪಿಸಿ ವಂದಿಸಿದರು. ಗೋಣಿಕೊಪ್ಪಲುವಿನ ದಾನಿಗಳಾದ ಕುಪ್ಪಂಡ ಅಶೋಕ್ ಅಪ್ಪಣ್ಣ ಶ್ವಾನ ಪ್ರದರ್ಶನದ ರಿಂಗ್ ಉದ್ಘಾಟಿಸಿ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು.

ತೀರ್ಪುಗಾರರಾಗಿ ಬೆಂಗಳೂರಿನ ಕರುಣಾ ಪ್ರಾಣಿ ದಯಾ ಸಂಘದ ಅಧ್ಯಕ್ಷರಾದ ಡಾ.ಜಯರಾಮಯ್ಯ, ಮೈಸೂರು ಕೆನಲ್ ಕ್ಲಬ್‌ನ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಡಾ.ಅರುಣ್, ಮೈಸೂರಿನ ನಿವೃತ್ತ ಉಪನಿರ್ದೇಶಕರಾದ ಡಾ.ಷಡಾಕ್ಷರ ಮೂರ್ತಿ ಭಾಗವಹಿಸಿದ್ದರು.

-ಹೆಚ್.ಕೆ.ಜಗದೀಶ್