ಕಣಿವೆ, ಡಿ. ೨೬: ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಗ್ರಾಹಕರಿಗೆ ಕೊಡ ಮಾಡುವ ಸಹಾಯ ಧನ ಪಡೆದುಕೊಳ್ಳಲು ಗ್ಯಾಸ್ ವಿತರಣಾ ಮಳಿಗೆಯ ಬಳಿ ಬಿಸಿಲನ್ನೂ ಲೆಕ್ಕಿಸದೇ ದಿನವಿಡೀ ನಡುರಸ್ತೆಯಲ್ಲಿಯೇ ಸಾಲು ಸಾಲು ಮಂದಿ ಇದ್ದಂತಹ ಚಿತ್ರಣ ಮಂಗಳವಾರ ಕಂಡುಬAತು.

ಇದೇ ಅಡುಗೆ ಅನಿಲ ಕಚೇರಿಯ ಬಳಿ ಸ್ಥಳೀಯ ಸಹಕಾರ ಸಂಘದ ಕಲ್ಯಾಣ ಮಂಟಪವೂ ಇದ್ದು ಅದರ ಮುಂದೆ ಸಾಲು ಸಾಲಾಗಿ ನಿಂತ ಮಂದಿಯನ್ನು ಕಂಡ ರಸ್ತೆ ಹೋಕರು, ಅಯ್ಯೋ ಇದೇನಿದು ಮದುವೆ ಮಂಟಪದ ಬಳಿ ಇಷ್ಟೊಂದು ಸಾಲು ಸಾಲು ಜನ ಎಂದು ಅಚ್ಚರಿಯಿಂದ ನಿಂತು ನೋಡಿ ತೆರಳುತ್ತಿದ್ದುದು ಕಂಡು ಬಂತು. ಅಡುಗೆ ಅನಿಲ ಪೂರೈಕೆ ಮಾಡುವ ಭಾರತ್ ಗ್ಯಾಸ್ ಕಚೇರಿಯಲ್ಲಿ ಒಬ್ಬರೇ ಕಂಪ್ಯೂಟರ್ ಆಪರೇಟರ್ ಇದ್ದುದು ಜೊತೆಗೆ ಆಗಾಗ್ಗೆ ಕಾಡುತ್ತಿದ್ದ ಸರ್ವರ್ ಸಮಸ್ಯೆ ಮಂದಿಯ ಸಾಲು ಉದ್ದವಾಗಲೂ ಕಾರಣವಾಯಿತು.

ಮಂಗಳವಾರ ಕುಶಾಲನಗರದ ಸಂತೆ ದಿನವಾದ್ದರಿಂದ ತಮ್ಮ ನಿತ್ಯದ ತೋಟ ಕೆಲಸಗಳಿಗೆ ರಜೆ ಮಾಡಿ ಬಂದಿದ್ದ ಬಹಳಷ್ಟು ಮಂದಿ ಮಹಿಳೆಯರು, ವಯೋವೃದ್ಧರು ಬಿಸಿಲಲ್ಲಿ ರಸ್ತೆಯಲ್ಲಿ ನಿಂತದ್ದು ಮಾತ್ರ ನೋಡುಗರಿಗೆ ಬೇಸರ ತರಿಸುವಂತಿತ್ತು.! - ಮೂರ್ತಿ