ನಾಪೋಕ್ಲು, ಡಿ. ೨೬: ನಾಪೋಕ್ಲು ವ್ಯಾಪ್ತಿಯಲ್ಲಿ ಭತ್ತದ ಬೆಳೆಯ ಕಟಾವಿನ ಹಂತದಲ್ಲಿ ಬೆಳೆಗಾರರು ಕಾಡು ಹಂದಿಗಳ ಉಪಟಳದಿಂದ ಕಂಗೆಟ್ಟಿದ್ದಾರೆ.
ಕೊಯ್ಲು ಮಾಡದೆ ಬಾಕಿ ಉಳಿದಿರುವ ಗದ್ದೆಗಳಿಗೆ ಗುಂಪು ಗುಂಪಾಗಿ ದಾಳಿ ಮಾಡುತ್ತಿದ್ದು ಬೆಳೆಗಾರರು ಕಾಡು ಹಂದಿಗಳ ಉಪಟಳದಿಂದ ಚಿಂತಿತರಾಗಿದ್ದಾರೆ. ಮಳೆ ಹಾಗೂ ಮೋಡ ವಾತಾವರಣದಿಂದಾಗಿ ಬೆಳೆ ಕೊಯ್ಲು ತಡ ಮಾಡಲಾಗಿತ್ತು. ಇದೀಗ ಕಾಡು ಹಂದಿಗಳು ಇಳುವರಿಯನ್ನು ಸಂಪೂರ್ಣ ತಿಂದು ನಾಶಪಡಿಸುತ್ತಿವೆ. ರಾತ್ರಿ ಹೊತ್ತಿನಲ್ಲಿ ಗದ್ದೆಗಳಿಗೆ ನುಗ್ಗುವ ಹಂದಿಗಳು ಬೆಳೆಯನ್ನು ತಿಂದು ಧ್ವಂಸ ಮಾಡುತ್ತಿದ್ದು ಕಷ್ಟ ಪಟ್ಟು ಬೆಳೆದು ನಿಂತ ಫಸಲು ಕೈಗೆ ಬಂದ ತುತ್ತು ಬಾಯಿಗೆ ಸಿಕ್ಕ ದಂತಾಗಿದೆ ಎಂದು ಬೆಳೆಗಾರರು ಅವಲತ್ತುಗೊಂಡಿದ್ದಾರೆ.
ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರು ತಮ್ಮ ಹಿರಿಯರ ಕಾಲದಿಂದಲೂ ನಿರಂತರ ಬೇಸಾಯ ಮಾಡುತ್ತಿದ್ದು ಮಾತ್ರವಲ್ಲದೇ ನಾಟಿ ಓಟ ಸ್ಪರ್ಧೆಯನ್ನು ಏರ್ಪಡಿಸುತ್ತಿರುವ ಈ ಗದ್ದೆಯ ಎಕರೆಗಟ್ಟಲೆ ಭತ್ತದ ಇಳುವರಿ ಹಂದಿಗಳ ಉದರವನ್ನು ಸೇರಿದೆ.
ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಇದೀಗ ಕೊಯ್ಲಿನ ಅವಧಿಯಲ್ಲಿ ಕಾಡುಹಂದಿಗಳ ಉಪಟಳ ವಿಪರೀತವಾಗಿದೆ. ಉಪಟಳ ತಡೆಯಲು ಸಾಧ್ಯವಾಗುತ್ತಿಲ್ಲ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಿ ಸರ್ಕಾರ ರಕ್ಷಣೆಗೆ ಮುಂದಾಗಬೇಕು ಎಂದು ನಂಜಪ್ಪ, ಕಂಗAಡ ಜಾಲಿ ಪೂವಪ್ಪ ಮನವಿ ಮಾಡಿದ್ದಾರೆ. -ದುಗ್ಗಳ ಸದಾನಂದ