ಗೋಣಿಕೊಪ್ಪ, ವರದಿ, ಡಿ. ೨೬: ಕೊಡವರಲ್ಲಿ ಕೋವಿ ಸಂರಕ್ಷಿಸುವ ವಿಧಾನ ಕೂಡ ವಿಶೇಷವಾದದ್ದು ಎಂದು ಕರ್ನಲ್ ಕೋಟ್ರಮಾಡ ನರೇಂದ್ರ (ನಿವೃತ್ತ) ಹೇಳಿದರು.

ಟಿ. ಶೆಟ್ಟಿಗೇರಿ ಶೂರ‍್ಸ್ ಕ್ಲಬ್ ವತಿಯಿಂದ ಶ್ರೀಮಂಗಲ ಕೊಡವ ಸಮಾಜದ ಆವರಣದಲ್ಲಿ ಆಯೋಜಿಸಿದ್ದ ಶೂಟಿಂಗ್ ಸ್ಪರ್ಧೆಯನ್ನು ತೆಂಗಿನ ಕಾಯಿಗೆ ಗುಂಡು ಹೊಡೆದು ಉದ್ಘಾಟಿಸಿ ಮಾತನಾಡಿ, ಕೋವಿ ಕೊಡವರ ಹುಟ್ಟು ಮತ್ತು ಸಾವಿನ ಪ್ರಮುಖ ಭಾಗವಾಗಿದೆ. ಇದು ಒಂದು ಸಂಸ್ಕೃತಿ. ಕೋವಿಯನ್ನು ಬಳಸುವ ವಿಧಾನ, ಸಂರಕ್ಷಿಸುವ ನಿಯಮ ಕೂಡ ನಮ್ಮಲ್ಲಿ ಕರಗತವಾಗಿ ಬಂದಿದೆ. ಕೇಂದ್ರ ಸರ್ಕಾರ ಕೂಡ ಕೊಡವರ ಕೋವಿ ಹಕ್ಕಿಗೆ ಪೂರಕವಾದ ಅಧಿಕಾರ ಕೂಡ ನೀಡಿದೆ. ಇದರಿಂದ ಕೋವಿಯ ಬಗ್ಗೆ ಅದ್ಯತೆ ಅರಿವಾಗಿದ್ದು, ಕೋವಿ ರಕ್ಷಣೆಗೆ ನಾವು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚಮಾಡ ಸುಮಂತ್ ಮಾತನಾಡಿ, ಶೂರ‍್ಸ್ ಕ್ಲಬ್‌ಗೆ ಮತ್ತಷ್ಟು ಪ್ರೋತ್ಸಾಹ ದೊರಕಲು ಕಟ್ಟಡದ ಅವಶ್ಯಕತೆ ಇದೆ. ಇದಕ್ಕೆ ಶ್ರೀಮಂಗಲ ಕೊಡವ ಸಮಾಜ ಅವಕಾಶ ನೀಡಬೇಕಿದೆ ಎಂದು ಮನವಿ ಮಾಡಿಕೊಂಡರು.

ಟಿ. ಶೆಟ್ಟಿಗೇರಿ ಶೂರ‍್ಸ್ ಕ್ಲಬ್ ಅಧ್ಯಕ್ಷ ತಡಿಯಂಗಡ ಕಂಬ ಕರುಂಬಯ್ಯ ಮಾತನಾಡಿ, ೩ನೇ ವರ್ಷದ ಕ್ರೀಡಾಕೂಟವಾಗಿದ್ದು, ಆಯೋಜನೆಯಿಂದ ಸಾಕಷ್ಟು ಕ್ರೀಡಾಪಟುಗಳಿಗೆ ವೇದಿಕೆ ದೊರೆಯುತ್ತಿದೆ ಎಂದರು.

ಉದ್ಯಮಿ ದೇಕಮಾಡ ಹರೀಶ್, ಕಾಫಿ ಬೆಳೆಗಾರರಾದ ಚೋನೀರ ರತ್ತು, ಕಳ್ಳಂಗಡ ಜಮುನಾ ಇದ್ದರು.

.೨೨ ವಿಭಾಗ, ೧೨ನೇ ಬೋರ್, ರೈಫಲ್, ಏರ್‌ಗನ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಸುಮಾರು ೩೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಕೋವಿಗೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸೂಚಿಸಲಾಯಿತು.