ಮಡಿಕೇರಿ, ಡಿ. ೨೫: ಭಾಗಮಂಡಲದಲ್ಲಿರುವ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಕಂಪೆನಿಯ ನೂತನ ಕಟ್ಟಡ ಉದ್ಘಾಟನೆ ತಾ. ೨೭ ರಂದು ನಡೆಯಲಿದೆ ಎಂದು ಕಂಪೆನಿ ಅಧ್ಯಕ್ಷ ಕೋಡಿ ಕೆ. ಪೊನ್ನಪ್ಪ ಮಾಹಿತಿ ನೀಡಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಿಮಾನಿಯ ಸಿಂಗತ್ತೂರು ಗ್ರಾಮದಲ್ಲಿ ೫೦ ಸೆಂಟ್ ಜಾಗ ಖರೀದಿಸಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ಎಸ್. ರಮೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಹೆಚ್.ಆರ್. ಯೋಗೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
೨೦೧೬ರಲ್ಲಿ ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಸ್ಥಾಪನೆಗೊಂಡ ಈ ಕಂಪೆನಿ ೬ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ರಾಜ್ಯದಲ್ಲಿ ಏಕೈಕ ಸ್ವಂತ ಕಟ್ಟಡ ಹೊಂದಿರುವ ರೈತ ಉತ್ಪಾದಕ ಕಂಪನಿ ಎಂಬ ಖ್ಯಾತಿಯನ್ನು ಗಳಿಸಿದೆ. ೬ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ೨೦ ಮಂದಿಯ ೫೭ ರೈತ ಗುಂಪುಗಳ ೧೧೪೦ ಸದಸ್ಯರನ್ನು ಹೊಂದಿದೆ. ರೈತರು ಬೆಳೆದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಉತ್ತಮ ಬೆಲೆ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಆಗುತ್ತಿದೆ. ತೆಂಗು ಬೆಳೆಗಾರರಿಂದ ಖರೀದಿಸಿದ ಉತ್ಪನ್ನದಿಂದ ಕೊಬ್ಬರಿ ಎಣ್ಣೆ ಉತ್ಪಾದನೆ, ಜೇನು ತುಪ್ಪ ಖರೀದಿಸಿ ಮಾರಾಟ, ಕಡಿಮೆದರದಲ್ಲಿ ಸಾವಯವ ಗೊಬ್ಬರವನ್ನು ಮಾರಾಟ ಸೇರಿದಂತೆ ರೈತರು ಬೆಳೆದ ಬೆಳೆಗೆ ಮೌಲ್ಯವರ್ದನೆಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸುತ್ತಿದ್ದು, ಆಡಳಿತ ಮಂಡಳಿ ಪದಾಧಿಕಾರಿಗಳು ಯಾವುದೇ ರೀತಿಯ ಭತ್ಯೆ ಪಡೆಯದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಾವಯವ ಗೊಬ್ಬರ ಕಾರ್ಖಾನೆ, ಕಾಫಿ ಪುಡಿ ತಯಾರಿಕೆ ಘಟಕ ಮಾಡುವ ಗುರಿ ಇದೆ. ಅದೇ ರೀತಿ ಚೆತ್ತುಕಾಯದಲ್ಲಿ ಸರಕಾರ ಜಾಗ ನೀಡಿದರೆ ತೆಂಗಿನ ಎಣ್ಣೆ ಉತ್ಪಾದನೆ ಘಟಕ ಮಾಡುತ್ತೇವೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬೊಪ್ಪಡತಂಡ ಕಿಶೋರ್, ಪೊಡನೋಲನ ವಿಠಲ, ಕುದುಪಜೆ ನಾಗೇಂದ್ರ, ಬಾರಿಕೆ ಪುಷ್ಪ ಹಾಜರಿದ್ದರು.