ನಾಪೋಕ್ಲು, ಡಿ. ೧೯: ಕಾಫಿ ಬೆಳೆಗಾರರಿಗೆ ತೆರೆದ ಬಾವಿ, ಕಣ ನಿರ್ಮಾಣ, ಕೆರೆ ನಿರ್ಮಾಣ ಹಾಗೂ ಪಂಪ್ಸೆಟ್ ಅಳವಡಿಸಲು ಕಾಫಿ ಮಂಡಳಿಯಿAದ ರಿಯಾಯಿತಿ ದರದಲ್ಲಿ ಸಬ್ಸಿಡಿ ನೀಡಲಾಗುವುದು. ಇದನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಭಾರತ ಸರ್ಕಾರದ ಕಾಫಿ ಮಂಡಳಿಯ ನಿರ್ದೇಶಕ ತಳೂರು ಎ. ಕಿಶೋರ್ ಕುಮಾರ್ ಹೇಳಿದರು.
ಸಮೀಪದ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾಫಿ ಮಂಡಳಿ ವತಿಯಿಂದ ರೈತರಿಗೆ ಆಯೋಜಿಸಲಾಗಿದ್ದ ಕಾಫಿ, ಕಾಳುಮೆಣಸು ಮತ್ತು ಹಣ್ಣು ಹಂಪಲುಗಳ ತೋಟಗಾರಿಕೆ ಬೆಳೆಗಳ ಬಗ್ಗೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಫಿ ಮಂಡಳಿ ವತಿಯಿಂದ ಬೆಳೆಗಾರರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾಫಿ ಬೆಳೆ ಮಾಡಲು ಮಿನಿ ಹಲ್ಲರ್ಗಳನ್ನು ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಎಲ್ಲಾ ಸಬ್ಸಿಡಿಗಳ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಹೇಳಿದರು. ರೈತರು ತೋಟಕ್ಕೆ ಯಾವ ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು ಮತ್ತು ಮಣ್ಣು ಪರೀಕ್ಷೆ ಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಅಪ್ಪಂಗಳದ ಭಾರತೀಯ ಆಹಾರ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಅಂಕೇಗೌಡ, ಚೆಟ್ಟಳ್ಳಿ ತೋಟಗಾರಿಕಾ ಇಲಾಖೆಯ ವಿಜ್ಞಾನಿ ಡಾ. ಮುರುಳಿಧರ್, ಕಾಫಿ ಮಂಡಳಿಯ ನಡಾಫ್, ಸದಾಶಿವ ರಾವ್, ನಾಗರಾಜ್ ಕಾವಿ, ಡಾ. ಮಂಜುನಾಥ್ ರೆಡ್ಡಿ, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಳಿಯಂಡ ಕಮಲ ಉತ್ತಯ್ಯ, ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಸುಶೀಲಾ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.