ಕರಿಕೆ, ಡಿ. ೧೯: ಓಮಿಕ್ರಾನ್ ರೂಪಾಂತರಿ ಜೆಎನ್-೧ ಕೇರಳದಲ್ಲಿ ಉಲ್ಭಣಿಸುತ್ತಿರುವ ಪರಿಣಾಮ ಕೇರಳ ರಾಜ್ಯದೊಂದಿಗೆ ಗಡಿಹಂಚಿ ಕೊಂಡಿರುವ ಕೊಡಗಿನಲ್ಲಿಯೂ ಮುನ್ನೆಚ್ಚರಿಕೆಗೆ ರಾಜ್ಯ ಸರಕಾರ ಮುಂದಾಗಿದೆ. ಆದರೆ, ಚೆಕ್‌ಪೋಸ್ಟ್ ಗಳಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯ ಇಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ.

ಕೊಡಗು-ಕೇರಳ ಗಡಿ ಪ್ರದೇಶವಾದ ಚೆಂಬೇರಿ ಚೆಕ್‌ಪೋಸ್ಟ್ನಲ್ಲಿ ಪ್ರಯಾಣಿಕರ ತಪಾಸಣೆ ಉದ್ದೇಶದಿಂದ ಇಬ್ಬರು ಆಶಾ ಕಾರ್ಯಕರ್ತೆಯರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೇ ಕಳೆದ ಕೋವಿಡ್ ಸಂದರ್ಭದಲ್ಲಿ ಚೆಕ್‌ಪೋಸ್ಟ್ನಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಇಲ್ಲಿ ಖಾಯಂ ಚೆಕ್‌ಪೋಸ್ಟ್ ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡಿದ್ದು, ಇದೀಗ ಶೌಚಾಲಯ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿದೆ.

ಕರ್ತವ್ಯ ನಿರತ ಆಶಾಕಾರ್ಯಕರ್ತೆಯರು ಅಶುಚಿತ್ವದಲ್ಲಿ ಕೂಡಿರುವ ಶೌಚಾಲಯ ಬಳಸಲು ಕಿರಿಕಿರಿ ಅನುಭವಿಸುತ್ತಿದ್ದಾರೆ. ಸರಕಾರ, ಜಿಲ್ಲಾ ಡಳಿತ ಕೇವಲ ಕಾಗದ ರೂಪದಲ್ಲಿ ಆದೇಶ ಹೊರಡಿಸುವ ಮೊದಲು ಹಿರಿಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಚೆಕ್‌ಪೋಸ್ಟ್ನಲ್ಲಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಣೆಗೆ ಕನಿಷ್ಟ ಮೂಲಭೂತ ಸೌಕ ರ್ಯಗಳನ್ನು ಖಚಿತಪಡಿ ಸಿಕೊಂಡು ನಂತರ ಮಹಿಳಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸುಧೀರ್ ಹೊದ್ದೆಟ್ಟಿ