ಸೋಮವಾರಪೇಟೆ, ಡಿ. ೧೭: ತಾಲೂಕು ಆಡಳಿತ ಸೌಧದಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಕಂದಾಯ ಹಾಗೂ ಸರ್ವೆ ಇಲಾಖೆಯ ಕೆಲವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾ ಗಿದೆ ಎಂದು ರೈತರು ಹಾಗೂ ಸಾಮಾಜಿಕ ಹೋರಾಟಗಾರರ ತಂಡದ ಸಂಚಾಲಕ ಬಿ.ಪಿ.ಅನಿಲ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿ, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇದರೊಂದಿಗೆ ರೈತರ ದುರಸ್ತಿ ಕಡತಗಳು ವಿಲೇವಾರಿ ಯಾಗುತ್ತಿಲ್ಲ. ಸೂಕ್ತ ಆಸ್ತಿ ದಾಖಲೆಗಳನ್ನು ನೀಡುತ್ತಿಲ್ಲ. ತಾ. ೧೮ರಂದು (ಇಂದು) ವಿವಿಧ ಸಂಘಟನೆಗಳ ಸಹಕಾರದಿಂದ ತಾಲೂಕು ಕಚೇರಿ ಎದುರು ಅಹೋ ರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದರು.
ಶಾಸಕ ಡಾ.ಮಂಥರ್ಗೌಡ ಅವರು ಎರಡು ಬಾರಿ ಆಡಳಿತ ಸೌಧದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆಸಿ ಸಭೆ ನಡೆಸಿ, ಎಲ್ಲಾ ದುರಸ್ತಿ ಕಡತಗಳನ್ನು ವಿಲೇವಾರಿ ಮಾಡಿ, ಆಸ್ತಿ ದಾಖಲೆಯನ್ನು ಮಾಡಿಕೊಡ ಬೇಕೆಂದು ಸೂಚಿಸಿದ್ದರು. ಆದರೆ ಭ್ರಷ್ಟರು ಶಾಸಕರ ಮಾತಿಗೂ ಬೆಲೆ ಕೊಡುತ್ತಿಲ್ಲ ಎಂದು ದೂರಿದರು. ಕಂದಾಯ ಇಲಾಖೆಯಲ್ಲಿರುವ ಎಲ್ಲಾ ದುರಸ್ತಿ ದಾಖಲಾತಿ ಸಿಗುವ ತನಕ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದರು.
ಈ ಹಿಂದೆ ಜುಲೈ ೧೮ರಂದು ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಅವರು ೧೫ ದಿನಗಳ ಒಳಗೆ ಅಗತ್ಯ ದುರಸ್ತಿ ಕಡತಗಳನ್ನು ವಿಲೇ ವಾರಿಯೊಂದಿಗೆ ದಾಖಲಾತಿ ಮಾಡಿಕೊಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಬಾಕಿಯಿರುವ ೩೦೦ ದುರಸ್ತಿ ಕಡತಗಳನ್ನು ವಿಲೇವಾರಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ಮೇಲಧಿಕಾರಿಯ ಭರವಸೆ ಸುಳ್ಳಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರೈತ ಪ್ರಮುಖರಾದ ಚೌಡ್ಲು ಗ್ರಾಮದ ಡಿ.ಎನ್.ಮದನ್ ಕುಮಾರ್, ಹಾನಗಲ್ಲು ಶೆಟ್ಟಳ್ಳಿ ಅಭಿಲಾಷ್, ಹೆಗ್ಗುಳ ಗ್ರಾಮದ ಬಿ.ಎಸ್. ರಜನಿಕಾಂತ್ ಇದ್ದರು.