ವೀರಾಜಪೇಟೆ, ಡಿ. ೧೭: ಕುಂದಾ ಮನೆಯಪಂಡ ಕುಟುಂಬದ ಆಶ್ರಯದಲ್ಲಿ ಮನೆಯಪಂಡ ಐನ್‌ಮನೆ ಸಮೀಪದಲ್ಲಿರುವ ಮುದರೆ ಪಾಲ ಮೈದಾನದಲ್ಲಿ ಮನೆಯಪಂಡ ಕುಟುಂಬದ ಪುತ್ತರಿ ಒತ್ತೋರ್ಮೆ ಕೂಟ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಎಸ್.ಪಿ ಮುಕ್ಕಾಟಿರ ಅಪ್ಪಯ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕುಟುಂಬದ ಅಧ್ಯಕ್ಷ ಮನೆಯಪಂಡ ರಾಜ ಸೋಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಆಚಾರ ವಿಚಾರ ಪದ್ದತಿ ಪರಂಪರೆ ಉಳಿಸಿ ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಗುರು ಕಾರೋಣ, ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭ ಐನ್‌ಮನೆ, ಗುರುಮಠ, ಗಣಪತಿ ಗುಡಿಯಲ್ಲಿ ಪ್ರತಿದಿನ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವ ಮನೆಯಪಂಡ ಬೊಳ್ಳು ಬೆಳ್ಳಿಯಪ್ಪ, ಅವರ ಪತ್ನಿ ಮಧು ಬೆಳ್ಳಿಯಪ್ಪ, ಮಕ್ಕಳಾದ ಆದಿತ್ಯ ಅಯ್ಯಣ್ಣ, ಆದರ್ಶ ಕುಟ್ಟಪ್ಪ ಇವರುಗಳನ್ನು ಪೀಚೆಕತ್ತಿ ನೀಡಿ ಸನ್ಮಾನ ಮಾಡಲಾಯಿತು. ಅದೇ ರೀತಿ ಸೇನೆಯಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿ ನಿವೃತ್ತಿಯಾದ ಮೇಜರ್ ಮನೆಯಪಂಡ ಬೋಪಣ್ಣ ಮತ್ತು ಅವರ ಕುಟುಂಬದವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು. ಮನೆಯಪಂಡ ಕಾಂತಿ ಸತೀಶ್, ಮನೆಯಪಂಡ ಅಂಜು ಸಚಿನ್, ಮನೆಯಪಂಡ ನಿಶಾ ಮಾಚಯ್ಯ, ಮನೆಯಪಂಡ ಪ್ರತಿಕಾ ಮೊಣ್ಣಪ್ಪ, ಮನೆಯಪಂಡ ಅಕ್ಕಮ್ ಬೋಪಣ್ಣ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಕುಟುಂಬದ ಕಾರ್ಯದರ್ಶಿ ನಾಚಪ್ಪ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರುಗಳಾದ ಧೀರಜ್, ಪೂವಯ್ಯ, ಬೋಪಣ್ಣ, ಧನ್ಯ, ಮಂಜು, ಪ್ರಜ್ವಲ್, ಮೊಣ್ಣಪ್ಪ, ರಮೇಶ್ ಸೇರಿದಂತೆ ಇತರರು ಇದ್ದರು. ದೇವಿಕಾ ಪೂವಯ್ಯ ಪ್ರಾರ್ಥಿಸಿ, ಧೀರಜ್ ಮಾಚಯ್ಯ ಸ್ವಾಗತಿಸಿ, ಮೇಜರ್ ಬೋಪಣ್ಣ ಅವರ ಸಾಧನೆಯ ಪರಿಚಯ ಮಾಡಿದರು.

ಪಟ್ಟೆದಾರ ಸಿದ್ದು ನಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತರಿ ಹಬ್ಬದ ಒತ್ತೊರ್ಮೆ ಕೂಟದ ಪ್ರಯುಕ್ತ ವಿವಿಧ ಆಟೋಟ, ಹಾಡು ನೃತ್ಯ ಸ್ಪರ್ಧೆಗಳು ನಡೆದವು. ಇದೇ ಸಂದರ್ಭ ವಿಜೇತರಿಗೆ ಬಹುಮನ ವಿತರಿಸಲಾಯಿತು. ಶೀಲಾ ಬೋಪಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಮನೆಯಪಂಡ ಕುಟುಂಬಸ್ಥರು, ತವರುಮನೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.