ಮಡಿಕೇರಿ, ಡಿ. ೧೩: ಲೋಕಸಭೆಯ ಕಲಾಪಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕಲರ್ ಗ್ಯಾಸ್ ಸಿಡಿಸುವ ಮೂಲಕ ಭಯಭೀತ ಪರಿಸ್ಥಿತಿಗೆ ಕಾರಣರಾದ ಆಘಾತಕಾರಿ ಘಟನೆ ನಡೆದಿದೆ. ಲೋಕಸಭೆಯ ಭದ್ರತಾಲೋಪ ಎತ್ತಿ ತೋರಿಸಿರುವ ಘಟನೆಯಲ್ಲಿ ಮೈಸೂರಿನ ಇಬ್ಬರು ಪಾಲ್ಗೊಂಡಿದ್ದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ದೆಹಲಿ ಕಚೇರಿಯಿಂದ ಪಾಸ್‌ಗಳನ್ನು ಪಡೆದು ಲೋಕಸಭೆಗೆ ಸಲೀಸಾಗಿ ಪ್ರವೇಶಿಸಿದ್ದಾರೆ.

ದೇಶದ ಹೃದಯದಂತೆ ಇರುವ ಪ್ರಜಾಪ್ರಭುತ್ವದ ದೇಗುಲವೇ ಆಗಿರುವ ಲೋಕಸಭೆ ಮೇಲೆ ಭಯೋತ್ಪಾದಕರು ೨೨ ವರ್ಷಗಳ ಹಿಂದೆ ಧಾಳಿ ನಡೆಸಿದ ದಿನವಾದ ಡಿ. ೧೩ ರಂದೆ ಮತ್ತೆ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಪ್ರಜಾಸತ್ತೆಯ ಮೇಲೆ ಆತಂಕ ಸೃಷ್ಟಿಸುವ ಪ್ರಯತ್ನ ವಾಗಿದೆ. ಭಾರತ ದೇಶವು ವಿಶ್ವಗುರು ಎಂದು ಖ್ಯಾತಿ ಗಳಿಸುತ್ತಿರುವ ದಿನಗಳಲ್ಲಿಯೇ ಸಂಸತ್‌ನೊಳಗಡೆ ಸಂಭವಿಸಿರುವ ಭದ್ರತಾ ಲೋಪದ ಈ ಘಟನೆ ಭಾರತದ ಪಾಲಿಗೆ ಜಾಗತಿಕವಾಗಿ ತೀರಾ ಮುಜುಗರ ಉಂಟು ಮಾಡಿದೆ.

ಭಾರತದ ಲೋಕಸಭೆಯ ನೂತನ ಸಂಸತ್ ಭವನದ ಕಟ್ಟಡದಲ್ಲಿ ಬುಧವಾರ ಬೆಳಿಗ್ಗೆ ೨೨ ವರ್ಷಗಳ ಹಿಂದೆ ಲೋಕಸಭೆ ಮೇಲೆ ಉಗ್ರರ ಧಾಳಿ ಸಂದರ್ಭ ಹುತಾತ್ಮರಾದ ಭದ್ರತಾಪಡೆಯ ಯೋಧರು, ಪೊಲೀಸರಿಗೆ, ಸಂಸದರು ಒಂದು ನಿಮಿಷದ ಮೌನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಲಾಪ ಪ್ರಾರಂಭವಾಗಿತ್ತು. ಆದರೆ, ಮಧ್ಯಾಹ್ನ ೧ ಗಂಟೆ ೧ ನಿಮಿಷದ ವೇಳೆಗೆ ಲೋಕಸಭೆಯ ಶೂನ್ಯ ವೇಳೆ ಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ನೀಲಿಬಣ್ಣದ ಜಾಕೆಟ್ ಧರಿಸಿದ್ದ ಯುವಕ ಮನೋರಂಜನ್ ಏಕಾಏಕಿ ಅಲ್ಲಿಂದ ಜಿಗಿದು ಸದನಕ್ಕೆ ಪ್ರವೇಶಿಸಿದ. ಈತನ ಜೊತೆಗಿದ್ದ ಸಾಗರ್ ಶರ್ಮ ಗ್ಯಾಲರಿಯಿಂದ ಜೋತಾಡುತ್ತಲೇ ಸದನದ ಒಳಕ್ಕೆ ಬಂದ. ಶರ್ಮ ಸದನದ ಸುತ್ತಲೂ ಓಡಾಡಲು ಪ್ರಾರಂಭಿಸಿದ. ಮನೋರಂಜನ್ ತನ್ನಲ್ಲಿದ್ದ ಬಣ್ಣದ ಅನಿಲವನ್ನು ಸಿಡಿಸಿದ.

ಸದನದ ಸಭಾಧ್ಯಕ್ಷರ ಪೀಠದ ಮುಂದೆ ಕೂಡ ಕಲರ್ ಗ್ಯಾಸ್ ಸಿಡಿಸಿದ ಪರಿಣಾಮ ಹಳದಿ ಬಣ್ಣದ ಹೊಗೆ ಸದನದ ಪೀಠಾಧ್ಯಕ್ಷರ ಆಸನದ ಬಳಿ ಕೂಡ ಕಾಣಿಸಿಕೊಂಡಿತ್ತು. ಇತ್ತ ಶರ್ಮ ಸದನದ ಆಸನಗಳ ಮೇಲೆ ಹತ್ತಿ ಛಂಗನೆ ನೆಗೆಯುತ್ತಾ ಮುಂದೆ ಸಾಗುತ್ತಿರುವಂತೆಯೇ ಗಾಬರಿಯಾದ ಅನೇಕ ಸಂಸದರು ಚೆಲ್ಲಾಪಿಲ್ಲಿಯಾಗಿ ಸದನದಿಂದ ಹೊರಕ್ಕೋಡತೊಡಗಿದರು. ಈ ವೇಳೆಗೆ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಕೆಲ ಯುವ ಸಂಸದರ ಸಹಾಯದೊಂದಿಗೆ ಧಾಳಿಕೋರ ಯುವಕರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಸಂಸದರ ಪಡೆ ಈ ಸಂದರ್ಭ ದಾಳಿಕೋರ ಯುವಕರನ್ನು ಥಳಿಸಿತ್ತು.

ಈ ಯುವಕರಿಗೆ ಬೆಂಬಲವಾಗಿ ಹೊರಗಡೆಯೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದ ರೈತ ಸಂಘಟನೆಯಲ್ಲಿ ಸಕ್ರಿಯಳಾಗಿದ್ದ ಉನ್ನತ ಶಿಕ್ಷಣ ಪಡೆದಿದ್ದ ಹರಿಯಾಣದ ಹಿಸಾರ್ ಗ್ರಾಮ ಮೂಲದ ನೀಲಂಕೌರ್ (೨೪ ವರ್ಷ) ಎಂಬ ಯುವತಿ, ಮಹಾರಾಷ್ಟçದ ಲಾತೂರ್ ಗ್ರಾಮದ ಅಮೋಲ್ ಶಿಂಧೆ (೨೫ ವರ್ಷ) ಜತೆಗೂಡಿಯೇ ಈ ಕುತಂತ್ರದ ಸಂಚು ರೂಪಿಸಿದ್ದರು. ಲೋಕಸಭಾ ಕಟ್ಟಡದ ಮುಂಬದಿ ಕೂಡ ಯುವತಿ ಕಲರ್ ಗ್ಯಾಸ್ ಸಿಡಿಸಿ ಎಲ್ಲರ ಗಮನ ಸೆಳೆದು ಆತಂಕದ ವಾತಾವರಣಕ್ಕೆ ಕಾರಣಳಾಗಿದ್ದಳು. ದೇಶದಲ್ಲಿನ ನಿರುದ್ಯೋಗ ಸಮಸ್ಯೆ ವಿರುದ್ಧ ಗಮನ ಸೆಳೆಯಲು ತಾವು ಈ ರೀತಿ ಮಾಡಿದ್ದಾಗಿ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದಾರೆ.

(ಮೊದಲ ಪುಟದಿಂದ) ಲೋಕಸಭಾ ಕಲಾಪಕ್ಕೆ ಅಡ್ಡಿಪಡಿಸಿ ಆತಂಕ ಸೃಷ್ಟಿಸಿದ ಯುವಕರರ‍್ವರೂ ಮೈಸೂರಿನವರು. ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ದೆಹಲಿ ಕಚೇರಿಯಿಂದಲೇ ಲೋಕಸಭಾ ಕಲಾಪ ವೀಕ್ಷಿಸಲು ಪಾಸ್ ಪಡೆದಿದ್ದರು. ಇವರನ್ನು ಸಾಗರ್ ರ‍್ಮ ಮತ್ತು ಇಂಜಿನಿಯರ್ ಮನೋರಂಜನ್ ಎಂದು ಗುರುತಿಸಲಾಗಿದೆ. ಇವರರ‍್ವರೂ ಈಗ ಸಂಸತ್ ಪೊಲೀಸ್ ಠಾಣೆಯ ಪೊಲೀಸರ ವಶದಲ್ಲಿದ್ದು ತೀವ್ರ ವಿಚಾರಣೆ ನಡೆಯುತ್ತಿದೆ.

ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ದೇಶದ ಉನ್ನತ ತನಿಖಾ ಸಂಸ್ಥೆಗಳಾದ ಎಫ್‌ಎಸ್‌ಎಲ್, ಎಸ್‌ಐಟಿ ಸೇರಿದಂತೆ ಕೆಲವು ಸಂಸ್ಥೆಗಳು ತೀವ್ರ ತನಿಖೆ ಕೈಗೊಂಡಿದೆ. ಸಂಸತ್ ಸದನ ಪ್ರವೇಶಿಸುವ ಮುನ್ನ ೩ ಸುತ್ತಿನ ಚಕ್ರವ್ಯೂಹದಂಥ ಭದ್ರತಾ ತಪಾಸಣೆ ಇದೆ, ಸೂಜಿನೂಲು ಕೂಡ ಪರಿಶೀಲನೆಗೊಳಪಡುತ್ತದೆ. ಹೀಗಿರುವಾಗ ಸಾಗರ್ ಶರ್ಮಾ ತನ್ನ ಶೂನಲ್ಲಿಯೇ ಕಲರ್ ಗ್ಯಾಸ್ ಇರಿಸಿಕೊಂಡದ್ದು ಹೇಗೆ ? ಇದು ಹೇಗೆ ಮೂರು ಹಂತದ ಭದ್ರತಾ ತಪಾಸಣೆ ಸಂದರ್ಭ ಭದ್ರತಾ ಪಡೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ತಿಳಿಯಲಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಇಂಥ ಗಂಭೀರ ಲೋಪ ಹೇಗೆ ಸಂಭವಿಸಿತು, ಅದೂ ಸಂಸತ್ತಿನ ಮೇಲೆ ಉಗ್ರರ ಧಾಳಿ ನಡೆದ ೨೨ ವರ್ಷಗಳ ಹಿಂದಿನ ಡಿ. ೧೩ ರಂದೇ ಇಂಥ ಧಾಳಿ ನಡೆಯಲು ಕಾರಣವಾದರೂ ಏನು ಎಂಬ ಬಗ್ಗೆಯೂ ವಿವಿಧ ಹಂತ ಗಳಲ್ಲಿ ತನಿಖೆ ನಡೆಯುತ್ತಿದೆ.

ಭಾರತದ ಪ್ರಜಾಪ್ರಭುತ್ವದ ದೇವಾಲಯ ಎಂದೇ ಬಣ್ಣಿ ಸಲ್ಪಟ್ಟಿರುವ, ಈ ದೇಶದ ಪ್ರಜಾಸತ್ತೆಯ ಅಡಿಪಾಯವಾಗಿರುವ ಲೋಕಸಭೆಗೆ ಪ್ರವೇಶಿಸಿ ಸಂಸದರು ಕೂತಿದ್ದಲ್ಲಿಗೆ ತೆರಳಿ ಹಳದಿ ಬಣ್ಣದ ಅನಿಲ ಹಾರಿಸಿ ಗದ್ದಲ ಎಬ್ಬಿಸುವ ಧೈರ್ಯ ತೋರಿದ ದುಷ್ಕರ್ಮಿಗಳು ಗಂಭೀರ ಸ್ವರೂಪದ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾರೆ.

೧. ಈ ಘಟನೆಯಲ್ಲಿ ದುಷ್ಕರ್ಮಿ ಗಳು ಅನಿಲ ಸಿಂಪಡಿಸುವ ಕಿರು ಸಿಲಿಂಡರ್ ಬದಲಿಗೆ ಜೀವ ತೆಗೆಯುವಂಥ ವಿಷಕಾರಿ ಅನಿಲವನ್ನೇ ಪ್ರಯೋಗಿಸಿದ್ದರೆ ಗತಿ ಏನಾಗುತ್ತಿತ್ತು.? ಭಾರತದ ಪರಿಸ್ಥಿತಿ ಏನಾಗುತ್ತಿತ್ತು.?

೨. ಈ ಮೊದಲು ೨೦೦೧ ರ ಡಿಸೆಂಬರ್ ೧೩ ರಂದು ಬಂದೂಕು ಧಾರಿ ಭಯೋತ್ಪಾದಕರು ಧಾಳಿ ನಡೆಸಿದ ಸಂದರ್ಭ ಸಂಸತ್ ಕಟ್ಟಡದ ಹೊರಬದಿಯೇ ಅವರನ್ನು ಹೊರಗಡೇ ತಡೆಹಿಡಿಯುವಲ್ಲಿ ಸಫಲರಾಗಿದ್ದರು. ಆದರೆ ಈ ಬಾರಿ ಸಂಸತ್ ಭವನದ ಒಳಗಡೇ ಕಲಾಪ ನಡೆಯುವ ಸ್ಥಳದಲ್ಲಿಯೇ ಧಾಳಿಯ ಪ್ರಯತ್ನ ನಡೆದಿದೆ. ಧಾಳಿಕೋರರ ಬಳಿ ಮಾರಕಾಸ್ತçಗಳಿದ್ದಿದ್ದರೆ ಏನಾಗುತ್ತಿತ್ತು ಎಂಬುದು ಊಹೆಗೂ ನಿಲುಕದ್ದು.

೩. ಸಾಮಾನ್ಯವಾಗಿ ದೆಹಲಿ ಯಲ್ಲಿನ ಕೇಂದ್ರ ಸರ್ಕಾರದ ಕಚೇರಿಗಳಿಗೆ ಪ್ರವೇಶಿಸುವಾಗಲೇ ಅನೇಕ ಹಂತದ ಭದ್ರತಾ ಪರಿಶೀಲನೆಗಳು ನಡೆಯುತ್ತದೆ. ಹೀಗಾಗಿ ಸಾಮಾನ್ಯವಾಗಿ ಯಾರೂ ದುಸ್ಸಾಹಸ ಮಾಡಿ ಭದ್ರತಾ ಪಡೆಗಳ ಹದ್ದಿನಗಣ್ಣಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ. ಹೀಗಿರುವಾಗ, ಸಂಸತ್ ಭವನದ ಒಳಗಡೆಯೇ ೩ ಸುತ್ತಿನ ಸರ್ಪಗಾವಲನ್ನೇ ಭೇದಿಸಿ ಒಳನುಗ್ಗಿದ್ದು ಭಾರತದ ಬಗ್ಗೆ ಜಾಗತಿಕವಾಗಿ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರು ವಂತಾಗಿದೆ.

೪. ಸಾಮಾನ್ಯವಾಗಿ ಗುಪ್ತಚರ ಇಲಾಖೆಯವರಿಗೆ ಇಂಥ ವಿಷಯಗಳ ಬಗ್ಗೆ ಮಾಹಿತಿ ಇರುತ್ತದೆ. ಲೋಕಸಭೆಯ ಸಂಸತ್ ಕಟ್ಟಡದ ಮೇಲೆ ಸದಾ ತನಿಖಾ ಸಂಸ್ಥೆಗಳು ಹದ್ದಿನಗಣ್ಣಿನಲ್ಲಿಯೇ ಗಮನ ಕೇಂದ್ರೀಕರಿಸಿರುತ್ತದೆ. ದಿನದ ೨೪ ಗಂಟೆಯೂ ಲೋಕಸಭೆಗೆ ಸರ್ಪಗಾವಲಿರುತ್ತದೆ. ಹೀಗಿರುವಾಗಲೇ ಸಂಸತ್ ಒಳಗೇ ನುಗ್ಗಿ ದಾಂಧಲೆ ಎಬ್ಬಿಸಿರುವ ಪ್ರಕರಣ ಭಾರತದ ಭದ್ರತಾ ವಿಚಾರದಲ್ಲಿ ನಿಜಕ್ಕೂ ಅಪಮಾನ ಮತ್ತು ಕಳವಳಕಾರಿ ವಿಚಾರದಂತಾಗಿದೆ.

೫. ಭಾರತದ ಮೇಲೆ ಧಾಳಿ ನಡೆಸಲು ಹೊರಗಿನ ಶತ್ರುಗಳು ಬೇಕಾಗಿಲ್ಲ. ಭಾರತದೊಳಗಿರುವ ಶತ್ರುಗಳಿಂದಲೇ ಸುಲಭವಾಗಿ ಧಾಳಿ ಸಾಧ್ಯವಿದೆ ಎಂಬುದನ್ನೂ ಈ ಆಘಾತಕಾರಿ ಘಟನೆ ತೋರಿಸಿದೆ.

೬. ಸಂಸತ್ ಭವನಕ್ಕೆ ದೇಶದಲ್ಲಿನ ಬೇರೆ ಯಾವುದೇ ಪ್ರದೇಶ ಇಲ್ಲವೆ ಕಟ್ಟಡವನ್ನು ಮೀರಿದ ಬಿಗಿ ಭದ್ರತೆಯನ್ನು ನೀಡಲಾಗಿದೆ. ಹೀಗಿದ್ದರೂ ಈ ಯುವಕರು ಸ್ಮೋಕ್ ಬಾಂಬು ಹಿಡಿದುಕೊಂಡು ಸಂಸತ್ ಒಳಗೆ ಹೇಗೆ ಪ್ರವೇಶಿಸಿದರು ಎಂಬುದು ದೇಶದ ಜನತೆಯ ಪ್ರಶ್ನೆಯಾಗಿದೆ. ಅದರಲ್ಲಿಯೂ ಪ್ರಧಾನಿ ಮೋದಿಯವರ ಕನಸಿನ ಭವನವಾಗಿ ನಿರ್ಮಿಸಲ್ಪಟ್ಟಿರುವ ಹೊಸ ಸಂಸತ್ ಭವನದಲ್ಲಿ ತೀವ್ರ ಸ್ವರೂಪದ ಭದ್ರತಾ ಲೋಪ ಉಂಟಾಗಿರುವುದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

೭. ೨೦೦೧ ರಂದು ೨೧ ವರ್ಷಗಳ ಹಿಂದೆ ಇದೇ ದಿನ ಧಾಳಿ ನಡೆದಿದ್ದು ಗೊತ್ತಿದ್ದರೂ ಇಂಥ ದಿನ ಸಾಮಾನ್ಯವಾಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದ್ದರೂ ಈ ಬಾರಿ ಭದ್ರತಾ ಪಡೆಗಳು ಏನು ಸಂಭವಿಸಲಿಕ್ಕಿಲ್ಲ ಎಂದು ನಿರ್ಲಕ್ಷಿಸಿದ್ದೂ ಕೂಡ ಖಂಡಿತಾ ಅಕ್ಷಮ್ಯ.

ದೆಹಲಿ ಕಚೇರಿಯಿಂದ ಸಿಂಹ ಸಹಿ ಇರುವ ಪಾಸ್ ಸಿಕ್ಕಿತ್ತು..!!

ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದರಿಂದಲೇ ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪ ಆಗಿದೆ ಎಂದು ಆರಂಭಿಸಿ ಮೈಸೂರಿನಲ್ಲಿರುವ ಪ್ರತಾಪ್ ಸಿಂಹ ಸಂಸದರ ಕಚೇರಿ ಮುಂದೆ ಬುಧವಾರ ಸಂಜೆ ಮೈಸೂರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಸಂಸತ್ ಸದಸ್ಯ ಸ್ಥಾನಕ್ಕೆ ಪ್ರತಾಪ್ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿದರು.

‘ಶಕ್ತಿ’ಗೆ ದೊರೆತ ಮಾಹಿತಿ ಅನ್ವಯ ಪ್ರತಾಪ್ ಸಿಂಹ ಅವರ ದೆಹಲಿ ಕಚೇರಿಯಿಂದ ಪಾಸ್ ವಿತರಿಸಲಾಗಿದೆ. ದೆಹಲಿ ಕಚೇರಿಯಲ್ಲಿ ಇರುವ ಪ್ರತಾಪ್ ಅವರ ಕಚೇರಿ ಕಾರ್ಯದರ್ಶಿ ಸಾಗರ್ ಎಂಬವರು ಮಂಗಳವಾರ ಮಧ್ಯಾಹ್ನ ಸಂಸದರ ಕಚೇರಿಗೆ ಬಂದಿದ್ದ ಮನೋರಂಜನ್ ಅವರಿಗೆ ಪಾಸ್ ನೀಡಿದ್ದಾರೆ.

ತನ್ನ ತಂದೆ ಪ್ರತಾಪ್ ಸಿಂಹ ಅವರಿಗೆ ನಿಕಟರಾಗಿದ್ದಾರೆ. ಹೀಗಾಗಿ ಪಾಸ್ ನೀಡಿ ಎಂದು ಮನೋರಂಜನ್ ಒತ್ತಾಯಿಸಿದ್ದ. ಸಾಕಷ್ಟು ಚರ್ಚೆ ಬಳಿಕ ಮನೋರಂಜನ್ ಮತ್ತು ಆತನ ಸ್ನೇಹಿತ ಸಾಗರ್ ಶರ್ಮ ಹೆಸರಿಗೆ ಪಾಸ್ ನೀಡುವಂತೆ ಅರ್ಜಿಯನ್ನು ಸಂಸತ್ ಭವನದ ಕಚೇರಿಗೆ ಕಳುಹಿಸಿದ್ದರು.

ಸಂಸದರ ಕಚೇರಿಯಿಂದ ಬಂದ ಅರ್ಜಿ ಎಂಬ ಕಾರಣದಿಂದ ಇದನ್ನು ಪುರಸ್ಕರಿಸಿದ ಲೋಕಸಭೆ ಕಚೇರಿ ಅಧಿಕಾರಿಗಳು ಕೂಡ ಹೆಚ್ಚು ಪರಿಶೀಲನೆ ನಡೆಸದೆ ಪಾಸ್ ವಿತರಿಸಿದ್ದಾರೆ. ಅದೇ ಪಾಸ್‌ನ್ನು ದುರುಪಯೋಗ ಪಡಿಸಿಕೊಂಡ ದುಷ್ಕರ್ಮಿಗಳು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣಕರ್ತರಾಗಿದ್ದಾರೆ.

ಮನೋರಂಜನ್ ಅವರನ್ನು ಒಮ್ಮೆಯೂ ಪ್ರತಾಪ್ ಭೇಟಿ ಆಗಿರಲಿಲ್ಲ. ಪಾಸ್ ನೀಡಿಕೆ ಬಗ್ಗೆ ಪ್ರತಾಪ್ ಗಮನಕ್ಕೂ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ನನ್ನ ಮಗ ಈ ರೀತಿ ಮಾಡಿದ್ದರೆ ಅದು ಅಕ್ಷಮ್ಯ ಮನೋರಂಜನ್ ತಂದೆ ದೇವರಾಜೇಗೌಡ ಹೇಳಿಕೆ

ಭಾರತದ ಸಂಸತ್ ಸದನ ದೇಗುಲ ಇದ್ದಂತೆ, ನನ್ನ ಮಗ ಹಾಗೆ ಮಾಡಿದ್ದರೆ ನಾನು ಕೂಡ ಇದನ್ನು ಖಂಡಿಸುತ್ತೇನೆ ಎಂದು ದೆಹಲಿ ಪೊಲೀಸರಿಂದ ಬಂಧಿತನಾಗಿರುವ ಮನೋರಂಜನ್ ತಂದೆ ದೇವರಾಜೇಗೌಡ ಮೈಸೂರಿನಲ್ಲಿ ತಿಳಿಸಿದ್ದಾರೆ.

ಲೋಕಸಭಾ ಕಲಾಪ ವೇಳೆ ಸಂಸತ್ ಭವನದೊಳಗೆ ಮನೋರಂಜನ್, ಸಾಗರ್ ಶರ್ಮಾ ಪ್ರವೇಶಿಸಿ ಆತಂಕ ಉಂಟುಮಾಡಿ ಬಂಧನಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ವಿಜಯನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಮನೋರಂಜನ್ ಬೆಂಗಳೂರಿನಲ್ಲಿಯೇ ಬಿಇ ಓದಿದ್ದ. ದೆಹಲಿ, ಬೆಂಗಳೂರು ಅಂತ ಓಡಾಡುತ್ತಿದ್ದ. ಆದರೆ, ಆತ ಎಲ್ಲಿಗೆ ಹೋಗಿದ್ದಾನೆ ಎಂದು ಗೊತ್ತಿಲ್ಲ. ನಾನು ರೈತ, ಆತ ತುಂಬಾ ಚೆನ್ನಾಗಿ ಓದುತ್ತಿದ್ದ ಎಂದು ಅವರು ವಿವರಿಸಿ ದರು.

೨೦೧೪ರಲ್ಲೇ ಬಿಇ ಮುಗಿಸಿದ ಮನೋರಂಜನ್, ಜಮೀನಿಗೆ ಬಂದು ಕಾರ್ಮಿಕರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ. ಮಗ ಎಲ್ಲಿಗೆ ಹೋಗುತ್ತಾನೆ, ಯಾಕೆ ಹೋಗುತ್ತಾನೆ ಅಂತ ಹೇಳುತ್ತಿರಲಿಲ್ಲ. ನನ್ನ ಮಗ ಈ ರೀತಿ ಮಾಡಿದ್ದರೆ ಅದು ಅಕ್ಷಮ್ಯ. ಆತ ಯಾಕೆ ಹೀಗೆ ಮಾಡಿದ ಅಂತ ಗೊತ್ತಿಲ್ಲ. ಈ ಪ್ರಕರಣದಲ್ಲಿರುವ ಇತರರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಆದರೆ, ಮಗ ಮಾತ್ರ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಅಷ್ಟುಬಿಟ್ಟು ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.

ಮನೋರಂಜನ್ ಕುರಿತು ತನಿಖೆ ತೀವ್ರಗೊಳಿಸಿದ ಪೊಲೀಸರು

ಪಾಸ್ ಮೂಲಕ ಸಂಸತ್ ಭವನ ಪ್ರವೇಶಿಸಿದ್ದ ಮೈಸೂರಿನ ಮನೋರಂಜನ್ ವಿಜಯನಗರದ ನಿವಾಸಕ್ಕೆ ಬುಧವಾರ ಮಧ್ಯಾಹ್ನ ಪೊಲೀಸರು ತೆರಳಿ ಮನೋರಂಜನ್ ಕುರಿತು ಮಾಹಿತಿ ಸಂಗ್ರಹಿಸಿದರು.

ಮನೋರAಜನ್ ಮೈಸೂರಿ ನವನು ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯ ಪ್ರವೃತ್ತರಾದ ಪೊಲೀಸರು ಮನೋರಂಜನ್ ನಿವಾಸಕ್ಕೆ ತೆರಳಿದರು. ಅಲ್ಲದೆ ಮನೆಯ ಬಳಿ ಪೊಲೀಸರನ್ನು ನಿಯೋಜಿಸಿದರು.

ವಿಜಯನಗರ ಉಪವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಅವರು ಮನೋರಂಜನ್ ಪೋಷಕರ ಜತೆ ಮಾತುಕತೆ ನಡೆಸಿ, ಮನೋರಂಜನ್ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಆತ ಓದಿದ ಶಾಲೆ, ಆತನ ಸ್ನೇಹಿತರು, ಆತನ ಕೊಠಡಿ ಮತ್ತು ಆತ ಬಳಸುತ್ತಿದ್ದ ವಸ್ತುಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಒಬ್ಬ ಜಿಗಿದ... ಮತ್ತೊಬ್ಬ ನೇತಾಡುತ್ತಿದ್ದ...!!

ಪ್ರತ್ಯಕ್ಷದರ್ಶಿ ಸಂಸದರು ಹೇಳಿದ್ದೇನು?

ಮಧ್ಯಾಹ್ನ ೧ ಗಂಟೆ ೧ ನಿಮಿಷಕ್ಕೆ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಸದನದ ಕೊಠಡಿಗೆ ಹಾರಿದ್ದಾರೆ. ಒಬ್ಬನು ಮೇಜುಗಳ ಮೇಲೆ ಜಿಗಿದರೆ, ಇನ್ನೊಬ್ಬ ಗ್ಯಾಲರಿಯಿಂದ ನೇತಾಡುತ್ತಿದ್ದ. ಬಳಿಕ ಆತನೂ ಮೇಜಿನ ಮೇಲೆ ಜಿಗಿದ ಎಂದು ಸದನದಲ್ಲಿದ್ದ ಸಂಸದರು ಹೇಳಿದ್ದಾರೆ.

ಲೋಕಸಭೆಗೆ ಪ್ರವೇಶಿಸಿದ ಆಗಂತುಕರಲ್ಲಿ ಒಬ್ಬ ‘‘ನಾನು ದೇಶ ಪ್ರೇಮಿ, ಪ್ರತಿಭಟನೆ ಮಾಡಲು ಬಂದಿದ್ದೇನೆ’’ ಎಂದು ಹೇಳಿರುವು ದಾಗಿ ಸಂಸದರು ಹೇಳಿದ್ದಾರೆ. ಇಬ್ಬರನ್ನೂ ಥಳಿಸಿದ ಸಂಸದರು ಬಳಿಕ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

ಲೋಕಸಭೆಗೆ ಪ್ರವೇಶಿಸಿದ ಆಗಂತುಕರು ಶೂನಲ್ಲಿ ಗ್ಯಾಸ್ ಕ್ಯಾನ್‌ಗಳನ್ನು ಅಡಗಿಸಿಟ್ಟು ಕೊಂಡಿದ್ದರು. ಅದರಿಂದ ಹಳದಿ ಬಣ್ಣದ ಹೊಗೆ ಸಿಂಪಡಿಸಿದರು ಎಂದು ಜೆಡಿಯು ಸಂಸದ ರಾಮ್‌ಪ್ರಿತ್ ಮಂಡಲ್ ಹೇಳಿದ್ದಾರೆ.

ಇಬ್ಬರಲ್ಲಿ ಒಬ್ಬ ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿದ್ದಾನೆ ಎಂದು ಮಂಡಲ್ ಹೇಳಿದ್ದಾರೆ.

‘ಸದನದಲ್ಲಿ ಇದ್ದಕ್ಕಿದ್ದಂತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಒಬ್ಬ ವ್ಯಕ್ತಿ ಒಂದು ಬೆಂಚ್‌ನಿAದ ಮತ್ತೊಂದಕ್ಕೆ ಹಾರುತಿದ್ದುದ್ದನ್ನು ಗಮನಿಸಿದೆವು. ಅದು ಅತ್ಯಂತ ಗಾಬರಿಯ ವಾತಾವರಣವಾಗಿತ್ತು. ಏನು ಬೇಕಾದರೂ ಆಗಬಹುದಿತ್ತು. ಒಂದು ಪಕ್ಷ ಅವನು ತನ್ನ ಪಾಕೆಟ್‌ನಲ್ಲಿ ಬಾಂಬ್ ಅಥವಾ ಬೆಂಕಿ ಹಚ್ಚುವ ಸಾಧನಗಳನ್ನು ಇಟ್ಟುಕೊಂಡಿದ್ದರೆ ಏನು ಗತಿ? ಇದೊಂದು ಗಂಭೀರ ಭದ್ರತಾ ಲೋಪ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದಾರೆ.

‘ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಧುಮುಕಿದರು. ಆ ಸಂದರ್ಭ ಅವರು ಹೊಗೆ ಸಿಂಪಡಿಸಿದರು. ಎಲ್ಲರೂ ಓಡಲು ಆರಂಭಿಸಿದರು. ಆಗಂತುಕರನ್ನು ಕೆಲ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಹಿಡಿದರು. ಅವರಲ್ಲಿ ಸಾಗರ್ ಶರ್ಮ ಎಂಬಾತ ಸಂಸದ ಪ್ರತಾಪ್ ಸಿಂಹ ಪಾಸ್ ಮೇಲೆ ಪ್ರವೇಶ ಪಡೆದಿದ್ದ’ ಎಂದು ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ.

ಇದೊಂದು ದೊಡ್ಡ ಭದ್ರತಾ ಲೋಪ, ಸಂಸತ್ ಭವನದ ಮೇಲಿನ ದಾಳಿ ನಡೆದ ದಿನವೇ ಈ ಲೋಪ ಆಗಿದೆ. ಈ ಬಗ್ಗೆ ತನಿಖೆ ನಡೆಯ ಬೇಕೆಂದು ಅವರು ಒತ್ತಾಯಿಸಿದ್ದಾರೆ.

‘ಸದನಕ್ಕೆ ನುಗ್ಗಿದ ಇಬ್ಬರು ವ್ಯಕ್ತಿಗಳು ಎರಡು ಡಬ್ಬಿಗಳಿಂದ ಹಳದಿ ಬಣ್ಣದ ಹೊಗೆಯನ್ನು ಸಿಂಪಡಿಸಿದರು. ಹೊಗೆ ವಿಷಕಾರಿಯಾಗಿರಬಹುದು. ಇದು ಗಂಭೀರ ಭದ್ರತಾ ಲೋಪ ವಾಗಿದೆ’ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರA ಕಿಡಿಕಾರಿದ್ದಾರೆ.

‘ಆಗಂತುಕರು ಹೊಗೆ ಸಿಂಪಡಿಸುತ್ತಾ ಸದನದ ಬಾವಿಯತ್ತ ನುಗ್ಗಲು ಮುಂದಾದರು. ಲೋಕಸಭೆ ಭದ್ರತೆಯಲ್ಲಿ ಗಂಭೀರ ಲೋಪ ವಾಗಿದೆ’ಎಂದು ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ. ಮೊದಲಿಗೆ, ಒಬ್ಬ ವ್ಯಕ್ತಿ ಅಚಾನಕ್ ಆಗಿ ಬಿದ್ದಿರಬಹುದು ಎಂದು ನಾವು ಭಾವಿಸಿದೆವು. ಆದರೆ, ಎರಡನೇ ವ್ಯಕ್ತಿ ಕೆಳಗೆ ಜಂಪ್ ಮಾಡಿದಾಗ ನಾವು ಜಾಗರೂಕ ರಾದೆವು’ ಎಂದು ಬಿಜೆಪಿ ಸಂಸದ ರಾಜೇಂದ್ರ ಅಗರವಾಲ್ ಹೇಳಿದರು.

‘ಗೃಹ ಸಚಿವ ಅಮಿತ್ ಶಾ ಬಹಳ ದೊಡ್ಡದಾಗಿ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ, ಸಂಸತ್ತಿನಲ್ಲಿ ಭದ್ರತೆಯನ್ನು ಕಾಪಾಡಲು ಅವರಿಗೆ ಸಾಧ್ಯವಾಗಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು’ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಇಬ್ಬರು ಯುವಕರು ಲೋಕಸಭೆಯ ಗ್ಯಾಲರಿಯಿಂದ ಧುಮುಕಿದರು. ಹಳದಿ ಬಣ್ಣದ ಅನಿಲವನ್ನು ಸಿಂಪಡಿಸಿದರು. ಅದು ದುರ್ವಾಸನೆ ಬೀರುತ್ತಿತ್ತು. ಸಂಸದರು ಅವರನ್ನು ಹಿಡಿಯಲು ಧಾವಿಸಿದರು. ಒಬ್ಬ ವ್ಯಕ್ತಿ ಕೆಲವು ಘೋಷಣೆಗಳನ್ನು ಕೂಗಿದ. ಇದು ಹೊಸ ಸಂಸತ್ ಭವನದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.