ಚೆಯ್ಯಂಡಾಣೆ, ಡಿ. ೧೪: ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್.ಎಫ್.) ವೀರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆಯಲಿದೆ.

ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ ಎಸ್.ಎಸ್.ಎಫ್ ವೀರಾಜಪೇಟೆ ಡಿವಿಷನ್ ಅಧ್ಯಕ್ಷ ಖಮರುದ್ದೀನ್ ಅನ್ವಾರಿ, ವಿದ್ಯಾರ್ಥಿಗಳ ಪ್ರತಿಭೆಗಳಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಹೊರತಂದು ಅವರ ಭವಿಷ್ಯವನ್ನು ಬೆಳಗಿಸಲು ಎಸ್‌ಎಸ್‌ಎಫ್ ಕಳೆದ ಎರಡು ದಶಕಗಳಿಂದ ಸಾಹಿತ್ಯೋತ್ಸವ ನಡೆಸಿಕೊಂಡು ಬರುತ್ತಿದೆ. ಭಾಷಣ, ಬರಹ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರು ನಮ್ಮಲ್ಲಿ ಹಲವರಿದ್ದಾರೆ. ಅವರನ್ನು ಸಮಾಜಕ್ಕೆ ಪರಿಚಯಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಸ್.ಎಸ್.ಎಫ್ ಸಾಹಿತ್ಯೋತ್ಸವದ ಮೂಲಕ ಬಹಳಷ್ಟು ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಸಮರ್ಪಿಸ ಲಾಗಿದೆ. ಸಾಹಿತ್ಯೋತ್ಸವ ಹೆಸರಿನಲ್ಲಿ ಎಸ್.ಎಸ್.ಎಫ್ ಒಂದು ವೇದಿಕೆಯಲ್ಲಿ ಎಲ್ಲಾ ಪ್ರತಿಭೆಗಳನ್ನು ಸೇರಿಸಿ ಇತಿಹಾಸ ಬರೆದಿದೆ. ಆದ್ದರಿಂದ ಕರ್ನಾಟಕ ಎಸ್ ಎಸ್ ಎಫ್ ಎರಡು ವರ್ಷಕ್ಕೊಮ್ಮೆ ನಡೆಸುತ್ತಿದ್ದ ಕಾರ್ಯಕ್ರಮವನ್ನು ಈ ವರ್ಷದಿಂದ ಪ್ರತಿ ವರ್ಷ ನಡೆಸಿಕೊಂಡುಬರಲು ತೀರ್ಮಾನಿಸ ಲಾಗಿದೆ. ಅದರಂತೆ ವೀರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ೨೦೨೩ ಕಡಂಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಎಸ್.ಎಸ್.ಎಫ್ ವೀರಾಜಪೇಟೆ ಡಿವಿಷನ್ ಕಾರ್ಯದರ್ಶಿ ರಷಾದ್ ಹೊಳಮಾಳ ಮಾತನಾಡಿ, ವೀರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ತಾ.೧೬ ಹಾಗೂ ೧೭ ರಂದು ಕಡಂಗದಲ್ಲಿ ನಡೆಯಲಿದೆ. ಡಿವಿಷನ್ ವ್ಯಾಪ್ತಿಯ ಐದು ಸೆಕ್ಟರ್‌ಗಳಾದ ಸಿದ್ದಾಪುರ, ಪೊನ್ನಂಪೇಟೆ, ವೀರಾಜಪೇಟೆ, ಕಡಂಗ ಹಾಗೂ ಪಾಲಿಬೆಟ್ಟ ಸೆಕ್ಟರ್‌ಗಳಿಂದ ಆಯ್ಕೆಯಾದ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ತಾ. ೧೬ ರಂದು ೩ ಗಂಟೆಗೆ ಕೊಕ್ಕಂಡಬಾಣೆ ಮಖಾಂ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ತಾ.೧೭ರ ರಾತ್ರಿ ಎಸ್ ಎಸ್ ಎಫ್ ಕೇರಳ ರಾಜ್ಯಾಧ್ಯಕ್ಷ ಫಿರ್ದೌಸ್ ಸುರೈಜಿ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್. ಎಸ್.ಎಫ್ ವೀರಾಜಪೇಟೆ ಡಿವಿಷನ್ ಪದಾಧಿಕಾರಿಗಳಾದ ಸುಫಿಯಾನ್ ಅಮಿನಿ, ಇಸ್ಮಾಯಿಲ್ ಅನ್ವಾರಿ ಅಹ್ಸನಿ, ಸ್ವಾಗತ ಸಮಿತಿಯ ಕನ್ವೀನರ್ ಮುಜೀಬ್ ಕಡಂಗ, ಇಸ್ಮಾಯಿಲ್ ಹನೀಫಿ ಇದ್ದರು.