ಸೋಮವಾರಪೇಟೆ, ಡಿ. ೧೨: ಹಸಿವು ಮುಕ್ತ ಕರ್ನಾಟಕದ ಆಶಯದೊಂದಿಗೆ ಅತೀ ಕಡಿಮೆ ದರದಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸುವ ಇಂದಿರಾ ಕ್ಯಾಂಟೀನ್ ಯೋಜನೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅನುಷ್ಠಾನಗೊಂಡಿದ್ದರೂ, ಸೋಮವಾರಪೇಟೆಯಲ್ಲಿ ಮಾತ್ರ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮತ್ತೊಮ್ಮೆ ಅನುಮೋದನೆ ನೀಡಿದೆ.
೨೦೧೩ರ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆ ಯನ್ನು ಜಾರಿಗೆ ತಂದಿದ್ದು, ಅದರಂತೆ ಬಹುತೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಆದರೆ ಸೋಮವಾರಪೇಟೆ ಪಟ್ಟಣದಲ್ಲಿ ಮಾತ್ರ ಈ ಕ್ಯಾಂಟೀನ್ನ ಕಟ್ಟಡ ಕಾಮಗಾರಿಗೆ ಕಾಲ ಕೂಡಿ ಬಂದಿರಲಿಲ್ಲ. ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡAತಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸುಮಾರು ೮.೫ ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅದರಂತೆ ಕ್ಯಾಂಟೀನ್ನ ತಳಪಾಯದ ಕಾಮಗಾರಿ ಮುಕ್ತಾಯ ಗೊಂಡು ಕೆಲ ವರ್ಷಗಳೇ ಕಳೆದಿವೆ.
ಇದೀಗ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸೋಮವಾರಪೇಟೆಯ ಇಂದಿರಾ ಕ್ಯಾಂಟೀನ್ಗೆ ಮತ್ತೆ ಮರುಜೀವ ಬಂದಿದೆ. ಈ ಸಾಲಿನಲ್ಲಿಯೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಮಡಿಕೇರಿ, ಕುಶಾಲನಗರ ದೊಂದಿಗೆ ಸೋಮವಾರಪೇಟೆಯಲ್ಲಿಯೂ ಇಂದಿರಾ ಕ್ಯಾಂಟೀನ್ ಕಾರ್ಯಾ ರಂಭಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಸದ್ಯಕ್ಕೆ ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಕ್ಯಾಂಟೀನ್ಗೆ ಗುರುತಿಸಿರುವ ನಿವೇಶನಕ್ಕೆ ತೆರಳಲು ಮೆಟ್ಟಿಲುಗಳ ನಿರ್ಮಾಣ, ತಳಪಾಯ ಕಾಮಗಾರಿ ಮುಕ್ತಾಯಗೊಂಡಿದೆ. ಮೋಲ್ಡ್ ಗೋಡೆಗಳ ನಿರ್ಮಾಣ, ಟೇಬಲ್ ಅಳವಡಿಕೆ, ಅಡುಗೆ ಕೋಣೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳು ಆಗಬೇಕಿದೆ.
ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಪ್ರಯತ್ನದ ಫಲವಾಗಿ, ಸೋಮವಾರಪೇಟೆಯಲ್ಲಿ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಮತ್ತೆ ಜೀವ ಪಡೆದಿದ್ದು, ಸರ್ಕಾರದಿಂದ ಅನುಮೋದನೆ ಪಡೆಯುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ.