ಮಡಿಕೇರಿ, ಡಿ. ೧೨: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಅಸಹಜತೆ ಕಂಡುಬAದಿದ್ದು ಇದು ಕೃಷಿ ಪ್ರಧಾನ ಜಿಲ್ಲೆಯ ಬೆಳೆಗಾರರು - ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅನಿರೀಕ್ಷಿತವಾಗಿ ಸಮಯವಲ್ಲದ ಸಮಯದಲ್ಲಿ ಹಲವೆಡೆಗಳಲ್ಲಿ ಮಳೆಯೂ ಸುರಿದಿದ್ದು ಸಮಸ್ಯೆ ಎದುರಿಸುವಂತಾಗಿದೆ.
ಮುAಗಾರಿನ ಸಂದರ್ಭದಲ್ಲಿ ಪ್ರಸಕ್ತ ವರ್ಷ ಸೂಕ್ತ ಬೆಳೆಯಾಗದಂತೆ ಸಮಸ್ಯೆ ಎದುರಾಗಿತ್ತು. ಆದರೂ ಉತ್ಸಾಹಿ ರೈತರು ಸಂಕಷ್ಟದ ನಡುವೆ ಒಂದಷ್ಟು ಭತ್ತದ ಕೃಷಿಯನ್ನು ಮಾಡಿದ್ದಾರೆ. ಇದೀಗ ಈ ಬೆಳೆ ಬಹುತೇಕ ಕಟಾವಿನ ಹಂತಕ್ಕೆ ಬಂದಿದ್ದು ಈ ಕೆಲಸ ಭರದಿಂದ ಸಾಗುತ್ತಿದೆ. ಆದರೆ ಇದೀಗ ಕೆಲ ದಿನಗಳಿಂದ ದಿಢೀರನೆ ವಾತಾವರಣ ದಲ್ಲಿ ಉಂಟಾಗಿರುವ ಬದಲಾವಣೆ ಯಿಂದಾಗಿ ಭತ್ತ ಕೃಷಿಕರು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅತ್ತ ಬೆಳೆದು ನಿಂತಿರುವ ಫಸಲನ್ನು ಕುಯಿಲು ಮಾಡಲು ಸಮಸ್ಯೆ ಎದುರಾಗಿದ್ದರೆ ಇತ್ತ ಈಗಾಗಲೇ ಕಟಾವು ಮಾಡಿರುವ ಫಸಲನ್ನು ಕಣಕ್ಕೆ ಸಾಗಿಸಲಾಗದೆ ಪರಿತಪಿಸುವಂತಾಗಿದೆ. ವರ್ಷದ ಬೆಳೆ ಕೈಗೆಟುಕುವ ಸಂದರ್ಭದಲ್ಲಿ ಪ್ರಾಕೃತಿಕ ಅಸಮತೋಲನ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಹಲವಾರು ಭಾಗಗಳಲ್ಲಿ ಪ್ರಸ್ತುತ ಸಮಸ್ಯೆ ಕಂಡುಬAದಿದೆ.
ಕಾಫಿ ಬೆಳೆಗಾರರಿಗೂ ಸಂಕಷ್ಟ
ಭತ್ತ ಕೃಷಿಕರ ಬವಣೆ ಒಂದೆಡೆ ಯಾದರೆ ಜಿಲ್ಲೆಯ ಆರ್ಥಿಕತೆಯ ಬೆನ್ನಲುಬಾದ ಕಾಫಿಗೂ ಈಗಿನ ವಾತಾವರಣದ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಈಗಾಗಲೇ ಅರೆಬಿಕಾ ಕಾಫಿ ಬಹುತೇಕ ಹಣ್ಣಾಗಿದ್ದು ಅರೆಬಿಕಾ ಕಾಫಿ ಕುಯಿಲು ಭರದಿಂದ ಸಾಗುತ್ತಿತ್ತು. ಕುಯಿದ ಕಾಫಿಯನ್ನು ಒಣಗಿಸಲು ಈಗಿನ ಮೋಡಕವಿದ ವಾತಾವರಣ ಅಡ್ಡಿಯಾಗುತ್ತಿದೆ. ಅಲ್ಲದೆ ತೋಟದಲ್ಲಿ ಹಣ್ಣಾಗಿ ನಿಂತಿರುವ ಕಾಫಿ ನೆಲಕಚ್ಚುತ್ತಿರುವುದೂ ಅರೆಬಿಕಾ ಬೆಳೆಗಾರರಿಗೆ ಸಮಸ್ಯೆಯಾಗಿದೆ.
ಇದೀಗ ರೋಬಸ್ಟಾ ಫಸಲೂ ಕೂಡ ಹಣ್ಣಾಗುತ್ತಿದ್ದು ಇದರ ಕುಯಿಲೂ ಹಲವೆಡೆಗಳಲ್ಲಿ ಆರಂಭಗೊAಡಿದೆ. ಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ನಡುವೆ ಬೆಳೆಗಾರರು ವರ್ಷಂಪ್ರತಿ ಬದುಕು ನಿಭಾಯಿಸುತ್ತಿದ್ದಾರೆ.
ಕೆಲವೆಡೆಗಳಲ್ಲಿ ತೋಟಗಳಲ್ಲಿ ಕಳೆÀ ಕೆಲಸ ನಿರ್ವಹಣೆ, ಎರತೆ ಕೆಲಸವೂ ಪ್ರಗತಿಯಲ್ಲಿದ್ದು ಎಲ್ಲದಕ್ಕೂ ಈಗಿನ ವಾತಾವರಣದಿಂದಾಗಿ ಸಮಸ್ಯೆಯಾಗುತ್ತಿದೆ. ಕಳೆದ ನಾಲ್ಕೆöÊದು ದಿನಗಳಿಂದಲೂ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವೇ ಮುಂದುವರಿದಿದೆ. ಒಂದೆರಡು ದಿನಗಳಿಂದ ಹಲವು ಕಡೆಗಳಲ್ಲಿ ಸುಮಾರು ೨೦ ಸೆಂಟ್ನಿAದ ಅರ್ಧ ಇಂಚಿಗೂ ಅಧಿಕ ಮಳೆಯೂ ಸುರಿದಿದೆ.
(ಮೊದಲ ಪುಟದಿಂದ) ವಿಚಿತ್ರವೆಂದರೆ ಡಿಸೆಂಬರ್ ಎರಡನೆಯ ವಾರದ ಸಂದರ್ಭದಲ್ಲಿ ಗುಡುಗು - ಮಿಂಚು ಸಹ ಕಂಡು ಬರುತ್ತಿರುವುದು - ಕಾರ್ಮಿಕರ ಸಮಸ್ಯೆ, ವನ್ಯಜೀವಿಗಳ ಉಪಟಳ ಬೆಲೆಯಲ್ಲಿನ ಅಸ್ಥಿರತೆ, ನಿರ್ವಹಣೆ ವೆಚ್ಚದಲ್ಲಿ ಹೆಚ್ಚಳ, ಅಧಿಕ ಕೂಲಿ ಮತ್ತಿತರ ರೀತಿಯ ಹಲವು ಸಂಕಷ್ಟಗಳ ನಡುವೆಯೇ ಬದುಕು ಸಾಗಿಸುತ್ತಿರುವ ಕಾಫಿ ಬೆಳೆಗಾರರು ಈ ವರ್ಷವೂ ಭವಿಷ್ಯದ ಬಗ್ಗೆ ಆತಂಕಪಡುವAತಾಗಿದೆ.
ಜನರ ಓಡಾಟವೂ ಕಡಿಮೆ
ಪ್ರಸ್ತುತದ ಪರಿಸ್ಥಿತಿಯಲ್ಲಿ ನಗರ - ಪಟ್ಟಣಗಳಲ್ಲಿ ಕಳೆದ ಕೆಲವು ದಿನಗಳಿಂದ ಜನರ ಓಡಾಟ ಕೂಡ ವಿರಳವಾಗಿದೆ. ಕೃಷಿ ಕೆಲಸ-ಕಾಫಿ ಕೆಲಸದ ಬಿರುಸು ಹಾಗೂ ವಾತಾವರಣದ ಏರು-ಪೇರಿನಿಂದಾಗಿ ವಾರ್ಷಿಕ ಬೆಳೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಹುತೇಕರು ಗದ್ದೆ-ತೋಟಗಳತ್ತಲೇ ಮುಖ ಮಾಡಿದ್ದಾರೆ.
ನಗರ-ಪಟ್ಟಣದಲ್ಲಿ ಇದರಿಂದಾಗಿ ವ್ಯಾಪಾರ ವಹಿವಾಟುಗಳೂ ಕೂಡ ಕಡಿಮೆಯಾಗಿರುವ ಕುರಿತು ವ್ಯಾಪಾರಸ್ಥರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಈಗಿನ ಸನ್ನಿವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಬೆಳೆಗಾರ ಕೈಬುಲೀರ ಎಂ. ಹರೀಶ್ ಅಪ್ಪಯ್ಯ ಅವರು ಬೆಳೆಗಾರರ ಸಂಕಷ್ಟದ ಕುರಿತು ವಿವರಿಸಿದ್ದಾರೆ. ಹಣ್ಣಾಗುತ್ತಿರುವ ಕಾಫಿ ಕುಯಿಲು ಮಾಡಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ ಕುಯಿದ ಕಾಫಿಯನ್ನು ಒಣಗಿಸಲೂ ಆಗುತ್ತಿಲ್ಲ. ಬಿಸಿಲಿಗೆ ಒಣಗಲು ಹಾಕಿದರೂ ಯಾವ ಸಮಯದಲ್ಲಿ ದಿಢೀರ್ ಮಳೆ ಬರುತ್ತದೋ ಎಂಬ ಆತಂಕ ಕಾಡುತ್ತಿದೆ. ಮಳೆ ಸುರಿದರೆ ಮತ್ತೂ ಸಮಸ್ಯೆಯಾಗುತ್ತದೆ. ಅದರಲ್ಲೂ ಸಂಜೆ ಅಥವಾ ರಾತ್ರಿ ಮಳೆ ಬಂದರೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೋರ್ವ ಪ್ರಗತಿಪರ ಬೆಳೆಗಾರ ಮಂದ್ರೀರ ತೇಜಸ್ ನಾಣಯ್ಯ ಅವರು ಪ್ರತಿಕ್ರಿಯಿಸಿದ್ದು ಈಗಿನ ವಾತಾವರಣ ಭತ್ತ ಹಾಗೂ ಕಾಫಿ ಈ ಎರಡೂ ಬೆಳೆಗೂ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ. ಎರಡೂ ಫಸಲು ಕುಯಿಲಿನ ಹಂತದಲ್ಲಿದ್ದು ಅಗತ್ಯ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾರೆ.