ಕಣಿವೆ, ಡಿ. ೮: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಮೂಲೆ ಗಿರಿಜನ ಹಾಡಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಅಲ್ಲಿನ ಗಿರಿಜನರ ಅಳಲನ್ನು ಆಲಿಸಿದ್ದಾರೆ.
‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಸರ್ಕಾರದ ಕನಿಷ್ಟ ಸೌಲಭ್ಯಗಳಿಲ್ಲದೇ ಬದುಕುತ್ತಿರುವ ಕೆರೆಮೂಲೆ ಗಿರಿಜನ ಹಾಡಿಯ ವಾಸಿಗಳು’ ಶೀರ್ಷಿಕೆಯ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಹಾಡಿಗೆ ತೆರಳಿ ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಆಧಾರ್ ಕಾರ್ಡ್, ಪಡಿತರ ಚೀಟಿ, ವೃದ್ಧಾಪ್ಯವೇತನ ಸೇರಿದಂತೆ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊAಡವರ ಪಟ್ಟಿಯನ್ನು ಸಿದ್ಧಪಡಿಸಿ ಕೂಡಲೇ ಸ್ಪಂದಿಸುವ ಭರವಸೆ ನೀಡಿದರು.
ಮನೆಗಳಿಲ್ಲದೇ ಹರಕು ಮುರುಕು ಗುಡಿಸಲಲ್ಲಿ ವಾಸಿಸುತ್ತಿರುವ ಮಂದಿಯ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ಕಿರಣ್ ಗೌರಯ್ಯ ನಿವಾಸಿಗಳಿಗೆ ಅಭಯ ನೀಡಿದರು.
(ಮೊದಲ ಪುಟದಿಂದ) ಪಡಿತರ ಚೀಟಿಗಳಿಲ್ಲದ ಫಲಾನುಭವಿಗಳಿಗೆ ಶೀಘ್ರಗತಿಯಲ್ಲಿ ಪಡಿತರ ವ್ಯವಸ್ಥೆ ಮಾಡುವುದಾಗಿ ಸ್ಥಳಕ್ಕೆ ತೆರಳಿದ್ದ ಕುಶಾಲನಗರ ತಾಲೂಕು ಆಹಾರ ಅಧಿಕಾರಿ ಸ್ವಾತಿ ತಿಳಿಸಿದರು. ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆಯ ವತಿಯಿಂದ ಅಗತ್ಯ ಸೌಲಭ್ಯ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು. ಕುಶಾಲನಗರ ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಗ್ರಾಮ ಲೆಕ್ಕಿಗ ಸಚಿನ್ ಇದ್ದರು. -ವರದಿ : ಕೆ.ಎಸ್.ಮೂರ್ತಿ