ಗೋಣಿಕೊಪ್ಪಲು, ಡಿ. ೮ : ಕಳೆದ ಹಲವು ಸಮಯದಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ದಿನದೂಡುತ್ತಿದ್ದ ಗಿರಿಜನರ ಹಾಡಿಗೆ ವಿದ್ಯುತ್ ನೀಡಲಾಗುತ್ತಿದ್ದು ಕ್ಷೇತ್ರದ ಶಾಸಕರ ವಿಶೇಷ ಕಾಳಜಿಗೆ ಹಾಡಿಯ ಗಿರಿಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ದ.ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲದಾಳ ಎಂಬ ಗಿರಿಜನ ಹಾಡಿಯಲ್ಲಿ ೧೮ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಕಳೆದ ಹಲವು ದಶಕಗಳ ಹಿಂದೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳಲ್ಲಿ ಗಿರಿಜನರು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದ ವತಿಯಿಂದ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸೌಕರ್ಯ ನೀಡಲಾಗಿತ್ತು.

ಇತ್ತೀಚೆಗೆ ವಿದ್ಯುತ್ ಇಲಾಖೆಯು ಗಿರಿಜನರ ವಾಸಿಸುವ ಮನೆಗಳಲ್ಲಿನ ವಿದ್ಯುತ್ ಬಿಲ್ ಬಾಕಿ ಇದೆ ಎಂಬ ಕಾರಣವೊಡ್ಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತು. ಇದರಿಂದ ರಾತ್ರಿ ವೇಳೆಯಲ್ಲಿ ಇಲ್ಲಿನ ಗಿರಿಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿತ್ತು. ಒಂದೊAದು ಮನೆಗೂ ಹತ್ತು ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್ ಬಾಕಿ ಇದೆ ಎಂಬುದಾಗಿ ಸೆಸ್ಕ್ನ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ನಿಲುಗಡೆಗೊಳಿಸಿದ್ದರು. ದೊಡ್ಡ ಮೊತ್ತದ ಹಣವನ್ನು ಇಲಾಖೆಗೆ ಕಟ್ಟಲಾಗದ ಗಿರಿಜನರು ತಮ್ಮ ನೋವನ್ನು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣನವರ ಗಮನಕ್ಕೆ ತಂದಿದ್ದರು.

ಗಿರಿಜನರ ಹಾಡಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಎ.ಎಸ್.ಪೊನ್ನಣ್ಣ ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ ಸೆಸ್ಕ್ನ ಹಿರಿಯ ಅಧಿಕಾರಿಗಳಾದ ಇಇ ರಮಾಬಾಯಿ ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು. ಸಮಾಜದ ಕಟ್ಟಕಡೆಯ ಗಿರಿಜನರ ವಿದ್ಯುತ್ ನಿಲುಗಡೆ ಮಾಡಿರುವುದು ಸರಿಯಾದ ಕ್ರಮವಲ್ಲ, ತಕ್ಷಣವೇ ವಿದ್ಯುತ್ ಸಂಪರ್ಕ ನೀಡುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರು.

ಶಾಸಕರ ಸೂಚನೆಯ ಮೇರೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ನಿಟ್ಟೂರಿನ ಪಾಲದಾಳ ಗಿರಿಜನರ ಹಾಡಿಗೆ ತೆರಳಿ ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್ ಕರೆಸಿಕೊಂಡು ಅಲ್ಲಿದ್ದ ೧೮ ಮನೆಗಳಿಗೂ ವಿದ್ಯುತ್ ಸಂಪರ್ಕ ಕೊಡಿಸಿದರು. ಇದರಿಂದ ಹಲವು ದಿನಗಳಿಂದ ಕತ್ತಲೆಯಲ್ಲಿ ದಿನ ಕಳೆಯುತ್ತಿದ್ದ ಗಿರಿಜನ ನಿವಾಸಿಗಳಿಗೆ ಮತ್ತೆ ವಿದ್ಯುತ್ ಸಂಪರ್ಕ ಸಿಕ್ಕಿದಂತಾಗಿದೆ.

ಈ ವೇಳೆ ನಿಟ್ಟೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಜೆ.ಎಸ್.ಅಪ್ಪಣ್ಣ, ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪೊರಂಗಡ ಪವನ್ ಚಿಟ್ಟಿಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಾದಲಿ ಸೇರಿದಂತೆ ಹಾಡಿಯ ಪ್ರಮುಖ ರಾಜು, ಮುತ್ತ,

ಚಿಪ್ಪ, ಬೋಜ ಮತ್ತಿತರರು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್