ಮಡಿಕೇರಿ, ಡಿ. ೪: ಬಿಜೆಪಿ ಸರಕಾರ ಇದ್ದಾಗ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದು ಇದಕ್ಕೆ ಈಗಿನ ಶಾಸಕರು ಒತ್ತು ನೀಡಿ ಹೆಚ್ಚಿಗೆ ಅನುದಾನ ಬಿಡುಗಡೆಗೊಳಿಸಲಿ ಎಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ; ಈ ಹಿಂದೆ ಬಿಜೆಪಿ ಸರಕಾರದ ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಆಗಿನ ಶಾಸಕರುಗಳು ಹಾಗೂ ಯುಕೊ ಸಂಘಟನೆಯವರು ಬೆಳಗಾವಿ ಅಧಿ ವೇಶನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡಿ ದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ, ಶಾಸಕರುಗಳು ಅನುದಾನ ಬಿಡುಗಡೆಗೆ ಒತ್ತು ನೀಡಲಿ, ಕೊಡವರ ಬಗ್ಗೆ ಕಾಳಜಿ ಇದ್ದರೆ ನಿಗಮದ ಮೂಲಕ ಹೆಚ್ಚಿನ ಅನುದಾನ ಒದಗಿಸಲಿ, ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಕ್ತಾರರು ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಸುಳ್ಳು ಆರೋಪ ಗಳನ್ನು ಮಾಡುತ್ತಿದ್ದಾರೆ. ಸಂಸದರು ಜಿಲ್ಲೆಗೆ ಭೇಟಿ ನೀಡುವದಿಲ್ಲ, ಅಭಿವೃದ್ಧಿ ಮಾಡಿಲ್ಲ ಎಂದು ಅಪಪ್ರಚಾರ ಮಾಡು ತ್ತಿದ್ದಾರೆ. ಸಂಸದರು ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡುತ್ತಾ ಅಭಿವೃದ್ಧಿ ಕೆಲಸ ಗಳನ್ನು ಮಾಡುತ್ತಿರುವದರಿಂದ ಭಯ ದಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರ ಕೊಡಗು ಜಿಲ್ಲೆಗೆ ವಿಶೇಷವಾಗಿ ರೂ.೧೦೦ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಸಂಸದರು ಎರಡು ಪ್ರಥಮ ದರ್ಜೆ ಕಾಲೇಜು ಗಳಿಗೆ ಅನುದಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಿದ್ದಾರೆ. ಆದರೆ ಈಗಿನ ಕಾಂಗ್ರೆಸ್ ಸರಕಾರ ಬಜೆಟ್‌ನಲ್ಲಿ ಒಂದು ರೂಪಾಯಿ ಅನುದಾನ ಮೀಸಲಿಟ್ಟಿಲ್ಲ. ಅಪಪ್ರಚಾರ ಆರೋಪಗಳ ಮೂಲಕ ರಾಜಕೀಯ ಮಾಡುವದನ್ನು ಬದಿಗಿರಿಸಿ ಅಭಿವೃದ್ಧಿ ಮಾಡುವ ಮೂಲಕ ರಾಜಕಾರಣ ಮಾಡಲಿ ಎಂದರು.

ಕೃಷಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಯಮುನ ಚಂಗಪ್ಪ ಮಾತನಾಡಿ; ಬೆಲೆ ಏರಿಕೆ ಬಗ್ಗೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಇದೀಗ ಬಿಟ್ಟಿ ಯೋಜನೆಗಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ, ವಿದ್ಯುತ್ ಬಿಲ್ ಏರಿಕೆ ಮಾಡಿದೆ, ನಿರುದ್ಯೋಗಿಗಳಿಗೆ ಹಣ ನೀಡುವದಾಗಿ ಹೇಳಿ ವಂಚನೆ ಮಾಡಿದೆ, ಇದನ್ನೆಲ್ಲ ಪ್ರಶ್ನಿಸುವವರು ಯಾರು ಎಂದು ಕೇಳಿದರಲ್ಲದೆ, ಅಭಿವೃದ್ಧಿ ಕೆಲಸ ಮಾಡುತ್ತಿರುವ ಸಂಸದರ ಮೇಲೆ ಆರೋಪ ಮಾಡುವದು ಸರಿಯಲ್ಲವೆಂದು ಹೇಳಿದರು.

ಗೋಷ್ಠಿಯಲ್ಲಿ ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಮನು ಮಂಜುನಾಥ್ ಇದ್ದರು.