ಮಡಿಕೇರಿ, ಡಿ. ೨: ಚಿಕ್ಕಮಗಳೂರಿನ ಯುವ ವಕೀಲ ಪ್ರೀತಂ ಅವರ ಮೇಲೆ ಚಿಕ್ಕಮಗಳೂರಿನ ಪೊಲೀಸ್ ಸಿಬ್ಬಂದಿಗಳು ಹಲ್ಲೆ ಮಾಡಿದ ಪ್ರಕರಣ ಖಂಡಿಸಿ ಮಡಿಕೇರಿ ವಕೀಲರ ಸಂಘದಿAದ ಪ್ರತಿಭಟನೆ ನಡೆಯಿತು.
ನ್ಯಾಯಾಲಯದ ಕಲಾಪಗಳಿಂದ ವಕೀಲರು ಸ್ವಯಂಪ್ರೇರಿತವಾಗಿ ಹೊರ ಉಳಿದು ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮಾತನಾಡಿ, ಯುವ ವಕೀಲರ ಮೇಲೆ ಚಿಕ್ಕಮಗಳೂರು ಪೊಲೀಸ್ ಸಿಬ್ಬಂದಿ ನಡೆಸಿರುವ ಹಲ್ಲೆ ಖಂಡನೀಯ. ವಕೀಲರು ಸಮಾಜದ ಅಭಿರಕ್ಷಕರು, ಇವರನ್ನೇ ಪೊಲೀಸ್ ಇಲಾಖೆಯವರು ಹೀಗೆ ನಡೆಸಿಕೊಂಡರೆ, ಇನ್ನು ಸಾಮಾನ್ಯ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ? ಎಂಬ ಪ್ರಶ್ನೆ ವಕೀಲ ಸಮುದಾಯದಲ್ಲಿ ಮೂಡಿದೆ, ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಾದರೂ ಕೂಡ ಆರೋಪಿಗಳನ್ನು ಬಂಧನ ಮಾಡದೇ ಇರುವುದು ಸರಿಯಲ್ಲ. ಪ್ರಕರಣದ ಗಂಭೀರತೆಯನ್ನು ಅರಿತ ರಾಜ್ಯ ಸರ್ಕಾರವು ಆರೋಪಿಗಳನ್ನು ಸೇವೆಯಿಂದ ಅಮಾನತು ಮಾಡಿದೆ. ಆದರೆ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.