ಶನಿವಾರಸಂತೆ, ಡಿ. ೨: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ವೈದ್ಯರ ಕೊರತೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) ಹೋಬಳಿ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆರೋಗ್ಯ ಕೇಂದ್ರದ ಮುಂಭಾಗ ಜಮಾಯಿಸಿದ ದಸಂಸ ಪದಾಧಿಕಾರಿಗಳು, ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು ಶನಿವಾರಸಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸಾರ್ವಜನಿಕರಿಗೆ ಅತ್ಯವಶ್ಯಕವಾಗಿದೆ. ಆದರೆ, ಇಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳ ಕೊರತೆ ಬಹಳ ಹಿಂದಿನಿAದಲೂ ಇದೆ. ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ವಾರದ ಹಿಂದೆ ಆರೋಗ್ಯ ಕೇಂದ್ರಕ್ಕೆ ಮಹಿಳೆಯೊಬ್ಬರು ಅನಾರೋಗ್ಯ ಕಾರಣ ಬಂದು ವೈದ್ಯರು ಇಲ್ಲದಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿರುತ್ತಾರೆ. ಇದಕ್ಕೆ ನೇರ ಹೊಣೆ ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯೇ ಆಗಿರುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರೆ ಬಡ ಕುಟುಂಬದ ಮಹಿಳೆಯ ಜೀವ ಉಳಿಯುತ್ತಿತ್ತು. ಈ ತರಹದ ನೂರಾರು ಘಟನೆಗಳು ಸಂಭವಿಸಿದ್ದು; ಆರೋಗ್ಯ ಇಲಾಖೆಗೆ ದೂರು ನೀಡಿದ್ದರೂ ಸೂಕ್ತ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಆರೋಪಿಸಿದರು.
ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸತೀಶ್ ಮಾತನಾಡಿ, ವೈದ್ಯರ ನೇಮಕಕ್ಕೆ ಪತ್ರಿಕೆಗಳಲ್ಲೂ ಪ್ರಕಟಣೆ ಕೊಡಲಾಗಿದೆ. ವೈದ್ಯರು ಬಂದಲ್ಲಿ ಶೀಘ್ರ ಆದೇಶ ನೀಡಲಾಗುವುದು. ಎಲ್ಲಾ ಜಿಲ್ಲೆಯಲ್ಲೂ ವೈದ್ಯರ ಕೊರತೆಯಿದೆ. ಶೀಘ್ರ ನೇಮಕಕ್ಕೆ ಸಾರ್ವಜನಿಕರ ಸಹಕಾರವೂ ಬೇಕು. ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದು ಖಾಯಂ ವೈದ್ಯರ ನೇಮಕಕ್ಕೆ ಪ್ರಯತ್ನಿಸ ಲಾಗುವುದು ಎಂದು ಭರವಸೆ ನೀಡಿದರು.
ಶೀಘ್ರ ಪರಿಹಾರ ಕಲ್ಪಿಸಿ. ಅಗತ್ಯ ಔಷಧಿಗಳನ್ನು ತರಿಸುವ ವ್ಯವಸ್ಥೆಯನ್ನೂ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆಗ್ರಹಕ್ಕೆ ಮಣಿದ ಡಾ.ಸತೀಶ್, ಶಾಸಕರಿಗೆ ತಿಳಿಸಿ ಖಾಯಂ ಆಡಳಿತ ವೈದ್ಯಾಧಿಕಾರಿ ನೇಮಕ ಮಾಡಿ ಅಫ್ರೂವಲ್ ಆಗುವವರೆಗೆ ಕೇಂದ್ರದ ಪ್ರಭಾರ ವೈದ್ಯಾಧಿಕಾರಿಯಾಗಿ ಡಾ.ಅಶೋಕ್ ಪ್ರತಿ ನಿತ್ಯವೂ ಕರ್ತವ್ಯ ನಿರ್ವಹಿಸುತ್ತಾರೆ. ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಔಷಧಿ ತರಿಸುವ ವ್ಯವಸ್ಥೆಯಾಗುವುದು.ಆರೋಗ್ಯ ಇಲಾಖೆ ಸಮಿತಿ ಸಮಸ್ಯೆಗೆ ಸ್ಪಂದಿಸುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಅವರ ಭರವಸೆಗೆ ಮಣಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ತಾಲೂಕು ನೋಡೆಲ್ ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಶನಿವಾರಸಂತೆ ಆರೋಗ್ಯ ಕೇಂದ್ರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಇಂದೂಧರ್, ಡಾ. ಬಿಪಿನ್ ಹಾಗೂ ಡಾ.ಅಶೋಕ್, ಡಾ. ರಕ್ಷಿತ್ ಹಾಜರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್, ಹೋಬಳಿ ಸಂಚಾಲಕ ಜೆ. ರೋಹಿತ್ ಕುಮಾರ್, ಸಂಘಟನಾ ಸಂಚಾಲಕ ಬಿ.ಕೆ. ದಯಾಕರ್, ಸಂಘಟನಾ ಸಂಚಾಲಕ ಮಧುಸೂದನ್, ಅಲ್ಪಸಂಖ್ಯಾತ ಘಟಕದ ಯಾಸೀನ್, ಸಾದಿಕ್, ಸಂಘಟನಾ ಸಂಚಾಲಕ ರಂಗಸ್ವಾಮಿ, ಹೋಬಳಿ ಸಂಚಾಲಕಿ ಕೋಮಲಾ ವಹಿಸಿದ್ದರು. ಹೋಬಳಿ ಘಟಕದ ಕಾರ್ಯಕರ್ತರು, ಮಲೆನಾಡು ರಕ್ಷಣಾ ಸೇನೆ ಹಾಗೂ ಕರವೇ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.