ಪೊನ್ನಂಪೇಟೆ, ಡಿ. ೨: ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಬಹು ಮುಖ್ಯ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಗೋಣಿ ಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಹೇಳಿದರು. ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಪೋಷಕರು ಮತ್ತು ಅಧ್ಯಾಪಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಮಾಡಬೇಕು. ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳೆದುರು ಯಾವುದೇ ರೀತಿಯ ಕೆಟ್ಟನಡವಳಿಕೆಯನ್ನು ತೋರ್ಪಡಿಸಿಕೊಳ್ಳಬಾರದು.

ಸಾಧ್ಯವಾದರೆ ತಿಂಗಳಿಗೊಮ್ಮೆ ಕಾಲೇಜಿಗೆ ಬಂದು ಉಪನ್ಯಾಸಕರನ್ನು ಭೇಟಿ ಮಾಡಿ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಬೇಕು, ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಶಿಕ್ಷಕರೊಂದಿಗೆ ಪೋಷಕರು ಕೈಜೋಡಿಸಬೇಕು ಎಂದರು. ಮತ್ತೊಬ್ಬರು ಅತಿಥಿ ಕಾವೇರಿ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ, ಕೆಲವು ಮಕ್ಕಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ದಿನಚರಿಯ ಬಗ್ಗೆ ಗಮನವಿಡಬೇಕು. ಮಕ್ಕಳು ಕಾಲೇಜಿನಿಂದ ಮನೆಗೆ ಬಂದಾಗ ಅವರ ಬ್ಯಾಗ್‌ನಲ್ಲಿ ಏನಿದೆ ಎಂಬುದನ್ನು ಪರೀಕ್ಷಿಸಬೇಕು. ಸಮಯ ಪಾಲನೆ ಹಾಗೂ ಶಿಸ್ತನ್ನು ಪಾಲಿಸುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದರು.

ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಅಧ್ಯಾಪಕರಿಂದ ಮಾಹಿತಿ ಪಡೆದುಕೊಂಡರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಎಂ.ಕೆ. ಪದ್ಮ, ಪೋಷಕರ ಮತ್ತು ಅಧ್ಯಾಪಕರ ಸಂಘದ ಕಾರ್ಯದರ್ಶಿ ಕುಟ್ಟಂಡ ಲವ ಪೊನ್ನಪ್ಪ, ಉಪಾಧ್ಯಕ್ಷೆ ಗಾಯತ್ರಿ, ಪೋಷಕರ ಮತ್ತು ಅಧ್ಯಾಪಕರ ಸಂಘದ ಸಂಚಾಲಕರಾದ ವಿಪ್ರ ನೀಲಮ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಎಂ.ಬಿ. ಪೂವಮ್ಮ ಇದ್ದರು. ಉಪನ್ಯಾಸಕರಾದ ಕುಸುಮ್ ಸ್ವಾಗತಿಸಿ, ಸಬ್ನ ಸೋಮಯ್ಯ ವಂದಿಸಿದರು.