ಶನಿವಾರಸಂತೆ, ನ. ೨೮: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೇಪುರ ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಳವಿಲ್ಲದಿರುವುದನ್ನು ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ.

ಗ್ರಾಮದ ಮಹಿಳೆ ಬಿಂದಮ್ಮ (೫೫) ಭಾನುವಾರ ಮೃತಪಟ್ಟಿದ್ದು ಶವದ ಅಂತ್ಯ ಸಂಸ್ಕಾರ ನೆರವೇರಿಸಲು ಗ್ರಾಮದಲ್ಲಿ ಸ್ಥಳವಿಲ್ಲದ್ದರಿಂದ ಮಹಿಳೆಯ ಶವವನ್ನು ಮನೆಯಲ್ಲಿಟ್ಟು ಸ್ಮಶಾನ ಭೂಮಿಗಾಗಿ ಗ್ರಾಮದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಈ ಹಿಂದೆ ಗ್ರಾಮದಲ್ಲಿ ಗ್ರಾಮಸ್ಥರು ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದ ಜಾಗವನ್ನು ಗ್ರಾಮದ ವ್ಯಕ್ತಿಯೊಬ್ಬರು ಅದು ತಮ್ಮ ಪಿತ್ರಾರ್ಜಿತ ಸ್ವತ್ತು ಎಂದು ಬೇಲಿ ಹಾಕಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಆ ಜಾಗದಲ್ಲಿ ಮಹಿಳೆಯ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ವ್ಯಕ್ತಿ ಪಟ್ಟು ಹಿಡಿದ ಕಾರಣ ಗ್ರಾಮಸ್ಥರು ಪ್ರತಿಭಟನೆಗೆ ಸಜ್ಜಾದರು. ಬೆಸೂರು ಗ್ರಾಮದ ವಿಪ್ಲವ ಯುವ ಬಳಗದ ಅಧ್ಯಕ್ಷ ರಂಗಸ್ವಾಮಿ, ಖಜಾಂಚಿ ಮಹೇಶ್, ನಿರ್ದೇಶಕರಾದ ಪ್ರಸನ್ನ, ಗಣೇಶ್, ಮಹಿಳಾ ಸಂಘದ ನಿರ್ದೇಶಕಿ ಪವಿತ್ರಾ ಗ್ರಾಮಸ್ಥರ ಸಹಕಾರದಿಂದ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ನರಗುಂದ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕೊಡ್ಲಿಪೇಟೆ ನಾಡಕಚೇರಿ ಕಂದಾಯ ಪರಿವೀಕ್ಷಕ ಮನು, ಬೆಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ಥಳಕ್ಕೆ ಧಾವಿಸಿದರು. ಗ್ರಾಮಸ್ಥರ ಮನವೊಲಿಸಿ ಮೃತ ಮಹಿಳೆಯ ಪತಿಯ ಸಮಾಧಿ ಪಕ್ಕದ ಸ್ಥಳದಲ್ಲೆ ಮಹಿಳೆಯ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಗ್ರಾಮಸ್ಥರು, ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಿಲ್ಲಿಸಿದರು.

ಈ ಹಿಂದೆ ಗ್ರಾಮದಲ್ಲಿ ಮಂಜೂರಾಗಿದ್ದ ಸ್ಮಶಾನ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಿ, ಸರ್ವೆ ಮಾಡಿಸಿ, ಜಾಗ ಗುರುತಿಸಿ ಕೊಡುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.