ಮಡಿಕೇರಿ, ನ.೨೮: ಕ್ರೀಡೆಯಲ್ಲಿ ಛಲ, ಪರಿಶ್ರಮದೊಂದಿಗೆ ಗುರಿ ಇದ್ದಾಗ ಖಂಡಿತ ಗೆಲವು ಸುಲಭ ಸಾಧ್ಯ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕ್ರೀಡಾಂಗಣ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ವಿದ್ಯಾಲಯದ ಸಹಯೋಗ ದಲ್ಲಿ ಆಯೋಜಿತ ಡಾ.ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಸ್ಮರಣಾರ್ಥ ಅಂತರ ಪ್ರೌಡಶಾಲಾ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯೆಯೊಂದಿಗೆ ಕ್ರೀಡೆ ಕೂಡ ಜೀವನದ ಭಾಗವಾಗಬೇಕು. ಕ್ರಿಕೆಟ್ ಸೇರಿದಂತೆ ಕ್ರೀಡೆಯಲ್ಲಿ ಛಲದ ಜತೆ ನಿರ್ದಿಷ್ಟ ಗೆಲುವಿನತ್ತ ಗುರಿ ಇದ್ದರೆ ವಿಜಯ ಸುಲಭವಾಗುತ್ತದೆ. ಯಾವುದೇ ಸಾಧನೆಯನ್ನು ಉಚಿತವಾಗಿ ಸಾಧಿಸಲಾಗದು. ಅಂತೆಯೇ ಕ್ರೀಡೆಯಲ್ಲಿ ಕಠಿಣ ಪರಿಶ್ರಮವೂ ಸಾಧನೆಗೆ ಅತೀ ಮುಖ್ಯವಾಗುತ್ತದೆ ಎಂದು ಶಾಂತ ರಂಗಸ್ವಾಮಿ ಕಿವಿಮಾತು ಹೇಳಿದರು.

ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಅಧ್ಯಾತ್ಮಿಕ ನೆಲೆಯಾದ ಭಾರತ ಪುಣ್ಯ ಭೂಮಿ ಕೂಡ ಆಗಿದ್ದು ಹೀಗಾಗಿಯೇ ವಿಶ್ವದಲ್ಲಿಯೇ ವಿಶ್ವಗುರುವಿನ ಸ್ಥಾನವನ್ನು ಭಾರತ ಪಡೆದಿದೆ. ಈ ಖ್ಯಾತಿಗೆ ಅನೇಕ ಸಾಧಕರ ಕೊಡುಗೆ ಇದೆ ಎಂದರಲ್ಲದೇ, ೧೮ ನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಕ್ರಿಕೆಟ್ ಕ್ರೀಡೆಯು ೧೯೩೨ ರಲ್ಲಿ ಭಾರತದಲ್ಲಿಯೂ ಪರಿಚಿತವಾಯಿತು. ೧೯೭೩ ರಲ್ಲಿ ಪ್ರಥಮ ಬಾರಿಗೆ ಮಹಿಳಾ ಕ್ರಿಕೆಟ್ ತಂಡವು ಕ್ರೀಡಾರಂಗಕ್ಕೆ ಪದಾರ್ಪಣೆ ಮಾಡಿತು. ಒಟ್ಟು ೧೬ ಕ್ಯಾಪ್ಟನ್ ಗಳನ್ನು ಕಂಡಿರುವ ಮಹಿಳಾ ಕ್ರಿಕೆಟ್ ತಂಡದ ೧೫ ನೇ ಕ್ಯಾಪ್ಟನ್ ಆಗಿರುವ ಶಾಂತಾ ರಂಗಸ್ವಾಮಿ ಕೊಡಗಿಗೆ ಬಂದಿರುವುದು ಮಹತ್ವದ ವಿಚಾರ ಎಂದು ಹೆಮ್ಮೆಯಿಂದ ನುಡಿದರು.

ಹೆಸರಾಂತ ಅಧ್ಯಾತ್ಮ ಗುರು ಮಮ್ತಾಜ್ ಅಲಿ (ಶ್ರೀ ಎಂ) ಮಾತನಾಡಿ, ಮಹಿಳಾ ಕ್ರಿಕೆಟ್ ತಂಡವು ಕೂಡ ಸಾಧನೆಯ ಮೂಲಕ ವಿಶ್ವಮಟ್ಟದಲ್ಲಿ ಗುರುವಿನ ಸ್ಥಾನ ಪಡೆಯುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡಿ, ಹಿರಿಯರು ನೀಡಿದ ಮಾರ್ಗದರ್ಶನ ಎಲ್ಲರಿಗೂ ಜೀವನದಲ್ಲಿ ಮೇಲ್ಪಂಕ್ತಿಯಾಗಬೇಕು. ೧೦ ವರ್ಷಗಳ ಹಿಂದೆ ಅಕಾಲಿಕವಾಗಿ ಸಾವನ್ನಪ್ಪಿದ ಕೊಡಗಿನ ಕ್ರೀಡಾ ಧ್ರುವತಾರೆಗಳಾದ ಡಾ.ಅಖಿಲ್ ಮತ್ತು ಅಶ್ವಥ್ ಅವರ ಸ್ಮರಣಾರ್ಥ ಈ ಸಹೋದರರ ತಂದೆ ರಘು ಮಾದಪ್ಪ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ೯ ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾ ಕಿರಿಯ ವಯಸ್ಸಿನ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿ ಸುತ್ತಿರುವುದು ಮೆಚ್ಚತಕ್ಕದ್ದು ಎಂದರು.

ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ಮಾತನಾಡಿ, ಯಾವುದೇ ಪಂದ್ಯದಲ್ಲಿ ಸೋತಾಗ ಅಂಥ ತಂಡವನ್ನು ಟೀಕಿಸದೇ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಾಮರ್ಶಿಸಿ ಗೆಲುವಿನ ಹಾದಿಗೆ ಅಗತ್ಯವಾದ ಅಂಶಗಳನ್ನು ಕಂಡುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಕ್ರೀಡಾ ಸಮಿತಿ ಅಧ್ಯಕ್ಷ, ಪಂದ್ಯಾವಳಿಯ ಆಯೋಜಕರಾದ ಕೋಡಿಮಣಿಯಂಡ ರಘು ಮಾದಪ್ಪ, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ಪಿ. ರವಿ, ಪ್ರಮುಖರಾದ ಡಾ.ಅನಿಲ್ ಚಂಗಪ್ಪ, ಬೋಸ್ ಮಂದಣ್ಣ, ಅಜಿತ್ ಅಪ್ಪಚ್ಚು, ಸಿ.ಎಸ್.ಗುರುದತ್, ಯಾಲದಾಳ್ ಹರೀಶ್, ಐಮುಡಿಯಂಡ ನಂದ, ದಾಮೋದರ್, ದಿನೇಶ್, ಬಿ.ವಿ.ನಂದ ಸೇರಿದಂತೆ ಅನೇಕರು ಹಾಜರಿದ್ದರು.

ಕೊಡಗು ವಿದ್ಯಾಲಯದ ಶಿಕ್ಷಕಿ ಎ.ಜಿ.ದಿವ್ಯಾ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಮೌಲ್ಯ ಪುಟ್ಟಯ್ಯ, ಪ್ರಥ್ವಿ ಪಿ.ರೈ ಪ್ರಾರ್ಥಿಸಿ, ಇಶಾನ್ ವಂದಿಸಿದರು.