ಮಡಿಕೇರಿ, ನ. ೨೫: ವಿದ್ಯಾರ್ಥಿಗಳು ಪ್ರಗತಿ ಕಾಣಬೇಕಿದ್ದರೆ ಗುರು-ಹಿರಿಯರಿಗೆ ಗೌರವ ನೀಡ ಬೇಕು ಎಂದು ಸಾಹಿತಿ ಮೇಚಿರ ಸುಭಾಷ್ ನಾಣಯ್ಯ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು. ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧ ಜೀವನ ಮುಖ್ಯ. ಮೊಬೈಲ್ ಗೀಳನ್ನು ವಿದ್ಯಾರ್ಥಿಗಳು ಕಡಿಮೆ ಮಾಡಬೇಕು. ಹೆಚ್ಚು ಮೊಬೈಲ್ ಬಳಕೆಯಿಂದ ಮಾನವನ ಜ್ಞಾನ ಹಾಗೂ ಯೋಚನಾ ಶಕ್ತಿ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮುಖ್ಯವಾಗಿರುವುದರಿಂದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಪ್ರೌಢಶಾಲಾ ಹಾಗೂ ಪದವಿ ಹಂತದಲ್ಲಿಯೇ ಸ್ಪರ್ಧಾ ಮನೋಭಾವ ಬೆಳೆಸುವುದು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಕರಿಸುತ್ತದೆ ಎಂದು ಅವರು ನುಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಪುಟ್ಟರಾಜು ಅವರು ಮಾತನಾಡಿ ಕಾಲೇಜು ಹಂತದ ಸ್ಪರ್ಧೆ ನಡೆಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಸತತ ಪ್ರಯತ್ನದಿಂದ ಸ್ಪರ್ಧಾ ಮನೋಭಾವದಿಂದ ಜೀವನದಲ್ಲಿ ಗುರಿ ತಲುಪಲು ಸಾಧ್ಯ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್. ವಿಜಯ್ ಅವರು ಮಾತನಾಡಿ, ತಾಯಿಯೇ ಮೊದಲ ಗುರು, ಮೊದಲಿಗೆ ಪೋಷಕರಿಗೆ ಗೌರವ ನೀಡಬೇಕು. ನಂತರದಲ್ಲಿ ಗುರುಗಳಿಗೆ ನಮನ ಸಲ್ಲಿಸಬೇಕು. ಗುರುಗಳು ವಿದ್ಯಾರ್ಥಿಗಳನ್ನು ಬೆಳೆಸುವ ರೀತಿ ಯಲ್ಲಿಯೇ ದೇಶ ಬೆಳೆಯುತ್ತದೆ. ಆದ್ದರಿಂದ ಗುರುಗಳ ಪಾತ್ರ ಮಹತ್ವದ್ದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇ ಜಿನ ಕನ್ನಡ ಉಪನ್ಯಾಸಕರಾದ ಕೆ.ಬಿ.ಗೌರಿ, ಆಂಗ್ಲ ಉಪನ್ಯಾಸಕರಾದ ಸೌಮ್ಯ, ವಿವಿಧ ಭಾಗದ ಕಾಲೇಜು ಮಟ್ಟದಲ್ಲಿ ಆಯ್ಕೆಯಾಗಿರುವ ಸ್ಪರ್ಧಾ ವಿದ್ಯಾರ್ಥಿಗಳು, ಇತರರು ಇದ್ದರು.