ಕುಶಾಲನಗರ, ನ. ೨೫: ಕುಶಾಲನಗರದ ಐತಿಹಾಸಿಕ ದೇವಾಲಯ ಶ್ರೀ ಗಣಪತಿ ದೇವಸ್ಥಾನದ ರಥೋತ್ಸವ ಮತ್ತು ಉತ್ಸವ ಈ ತಿಂಗಳ ೨೭ರಿಂದ ಆರಂಭಗೊಳ್ಳಲಿದೆ.
ಗಣಪತಿ ದೇವರ ರಥೋತ್ಸವ ಡಿಸೆಂಬರ್ ೧ ರಂದು ಮಧ್ಯಾಹ್ನ ೧೨ ಗಂಟೆಗೆ ಜರುಗಲಿದೆ.
ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಕಾರ್ತಿಕ ಶುದ್ಧ ಪೂರ್ಣಿಮೆ ದಿನವಾದ ನವೆಂಬರ್ ೨೭ರಂದು ಬೆಳಿಗ್ಗೆ ದೇವಾಲಯದಲ್ಲಿ ಸತ್ಯನಾರಾಯಣ ಪೂಜೆ, ಸಂಜೆ ದೀಪಾರಾಧನೆ, ಕಾರ್ತಿಕ ದಟ್ಟೋತ್ಸವ, ಪೂಜಾ ಕಾರ್ಯಕ್ರಮಗಳು ಜರಗಲಿವೆ. ೨೮ರಂದು ಬೆಳಿಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ಸಂಜೆ ೮ ಗಂಟೆಗೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ತಾ.೨೯ರಂದು ಬೆಳಿಗ್ಗೆ ದೇವಾಲಯದಲ್ಲಿ ಪೂಜೆ, ರಕ್ಷಾ ಬಂಧನ, ಅಂಕುಲಾರ್ಪಣ, ಕಳಶ ಸ್ಥಾಪನೆ, ಗಣಪತಿ ಹೋಮ ನವಗ್ರಹ ಹೋಮ ಮತ್ತಿತರ ಪೂಜಾ ಕಾರ್ಯಕ್ರಮಗಳು, ಸಂಜೆ ಮೂಷಿಕ ವಾಹನ ಉತ್ಸವ ಜರಗಲಿದೆ. ೩೦ರಂದು ಬೆಳಿಗ್ಗೆ ಧ್ವಜಾರೋಹಣ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಸಂಜೆ ಚಂದ್ರ ಬಿಂಬೋತ್ಸವ ಕಾರ್ಯಕ್ರಮ ಜರುಗುವುದು.
ಡಿಸೆಂಬರ್ ೧ ರಂದು ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ ನಡೆಯಲಿದೆ. ದೇವಾಲಯದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪುಷ್ಪಾಲಂಕಾರ ರಥ ಪೂಜೆ, ರಥ ಬಲಿ ನಂತರ ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಡಿಸೆಂಬರ್ ೨ರಂದು ಸಂಜೆ ಮಂಟಪೋತ್ಸವ ಕಾರ್ಯಕ್ರಮ, ೩ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, ೪ ರಂದು ಅಂದೊಲಿಕೋತ್ಸವ, ಸನ್ನಿಧಿಯಲ್ಲಿ ಉಯ್ಯಾಲೋತ್ಸವ ಪೂಜಾ ಕಾರ್ಯಕ್ರಮ ಜರುಗಲಿದೆ.
ತಾ.೫ ಮಂಗಳವಾರ ಬೆಳಿಗ್ಗೆ ಪೂಜಾ ಕಾರ್ಯಕ್ರಮಗಳು ಜರುಗಿ ಸಂಜೆ ಕಾವೇರಿ ನದಿ ತೀರದಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು..
೬ ರಂದು ಬೆಳಿಗ್ಗೆ ಕಾವೇರಿ ನದಿಯಲ್ಲಿ ತೀರ್ಥಸ್ಥಾನ ನಂತರ ದೇವಾಲಯದಲ್ಲಿ ಧ್ವಜಾರೋಹಣ, ಪೂಜಾ ಕಾರ್ಯಕ್ರಮ ನಂತರ ತೀರ್ಥ ಪ್ರಸಾದ ವಿನಿಯೋಗ, ಸಂಜೆ ದೇವಾಲಯದಲ್ಲಿ ಅಷ್ಟೋತ್ತರ ಶತನಾಮ ಪೂಜೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆಯ ಎಲ್ಲಾ ಕಾರ್ಯಕ್ರಮಗಳು ಸೇವಾರ್ಥದಾರರ ಮೂಲಕ ನಡೆಯುವುದು.
ಗಣಪತಿ ದೇವರ ರಥೋತ್ಸವ ಅಂಗವಾಗಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಅಲಂಕರಿಸಿ ನಗರವನ್ನು ಸಿಂಗರಿಸಲಾಗಿದೆ.
ಜಾತ್ರೋತ್ಸವ ಅಂಗವಾಗಿ ಕುಶಾಲನಗರ ಗುಂಡೂರಾವ್ ಬಡಾವಣೆಯಲ್ಲಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್, ಸಂತೆ ಮಾರುಕಟ್ಟೆ ಏರ್ಪಡಿಸಲಾಗಿದೆ. ಒಂದು ವಾರ ಕಾಲ ಗುಂಡುರಾವ್ ಬಡಾವಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಕಾರಣಾಂತರಗಳಿAದ ಈ ಬಾರಿ ಕೂಡ ರಾಸುಗಳ ಜಾತ್ರೆ ಇರುವುದಿಲ್ಲ ಎಂದು ದೇವಾಲಯ ಸಮಿತಿಯ ಗೌರವ ಅಧ್ಯಕ್ಷರಾದ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.
ರಥೋತ್ಸವ ದಿನ ಭಕ್ತಾದಿಗಳಿಗೆ ಹಳೆ ಮಾರುಕಟ್ಟೆ ರಸ್ತೆಯ ಕಲ್ಯಾಣ ಮಂಟಪದಲ್ಲಿ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.