ಶನಿವಾರಸಂತೆ, ನ. ೨೫: ಶನಿವಾರಸಂತೆ ಸಮೀಪದ ಕೊಡಗು-ಹಾಸನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಸೂರು ಬಸವೇಶ್ವರ ಕೌಟೆಕಾಯಿ ಜಾತ್ರೆ ತಾ. ೨೭ರಂದು ನಡೆಯಲಿದೆ. ಹೊಸೂರು ಗ್ರಾಮ ಕಂದಾಯ ವ್ಯವಹಾರವೊಂದನ್ನು ಹೊರತುಪಡಿಸಿದಂತೆ ಕೊಡಗಿನ ಶನಿವಾರಸಂತೆಯಲ್ಲಿ ದಿನನಿತ್ಯದ ಓಡಾಟ, ವ್ಯವಹಾರ ಹೊಂದಿರುವ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಕೌಟೆಕಾಯಿ ಜಾತ್ರೆಗೆ ೪೦೦ ವರ್ಷಗಳ ಇತಿಹಾಸ ಇದೆ.
ತಾ. ೨೭ ರಂದು ಜಾತ್ರೆ ಬಸವೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆಯಲಿದ್ದು, ಅಂದು ಬೆಳಿಗ್ಗೆಯಿಂದ ಬೆಟ್ಟದ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿ ವಿಧಾನದಲ್ಲಿ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನ ಸಮಿತಿ ವತಿಯಿಂದ ಬೆಂಗಳೂರಿನ ಉದ್ಯಮಿ ಕೆ.ಟಿ. ಬೆಳ್ಳಿಗೌಡ್ರು ಕಾಮನಳ್ಳಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಹಾಯಕ ಸೋಮೇಗೌಡ, ಶನಿವಾರಸಂತೆಯ ಪತ್ರಕರ್ತ ಕೆ.ಎನ್. ದಿನೇಶ್ ಮಾಲಂಬಿ ಇವರುಗಳನ್ನು ಸನ್ಮಾನಿಸ ಲಾಗುವುದು. ಕಾರ್ಯಕ್ರಮದಲ್ಲಿ ಸಕಲೇಶಪುರ-ಆಲೂರು ಶಾಸಕ ಮಂಜು, ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಪ್ರಮುಖರಾದ ಮರುಳಿ ಮೋಹನ್, ಬೆಕ್ಕನಹಳ್ಳಿ ನಾಗರಾಜ್, ತೀರ್ಥಾನಂದ, ಅರುಣ್ ಬಾವೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ.