ಮಡಿಕೇರಿ, ನ. ೨೫: ಬೈಗುಳ ಎಂಬದು ಎಲ್ಲರ ಜೀವನದಲ್ಲೂ ಹಾಸು ಹೊಕ್ಕಾಗಿರುತ್ತದೆ ಎಂದು ಕನ್ನಡ ಬೈಗುಳದಲ್ಲಿ ಡಾಕ್ಟರೇಟ್ ಮಾಡಿರುವ ಕನ್ನಡ ಪ್ರಾಧ್ಯಾಪಕ ಡಾ. ಸಿ.ಪಿ. ನಾಗರಾಜು ಹೇಳಿದರು.
೬೮ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅಲ್ಲಾರಂಡ ರಂಗ ಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಸಹಯೋಗದೊಂದಿಗೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ಬೈಗುಳ ಸಾಹಿತ್ಯೋತ್ಸವವನ್ನು ಉದ್ಘಾಟನೆ ಮಾಡಿ ಆವರು ಮಾತನಾಡಿದರು. ಎಲ್ಲರ ಮನೆಯಲ್ಲಿಯೂ ಬೈಗುಳ ಅನ್ನೋದು ಇದ್ದೇ ಇರುತ್ತದೆ. ಆದರೆ ಅದು ಯಾರಿಗೂ ಕೇಳುವುದಿಲ್ಲ. ತನ್ನ ಜೀವನಕ್ಕೆ ಬೇಕಾದ ಪ್ರಾಥಮಿಕ ಅಗತ್ಯತೆಗಳನ್ನು ಪಡೆಯಲು ಹಂಬಲಿಸುವ ಬಡವನ ಬೈಗುಳಗಳು ಮಾತ್ರ ಬೀದಿಯಲ್ಲಿ ಕೇಳುತ್ತವೆ. ತನ್ನಲ್ಲಿರುವ ಕೋಪ, ಸಂಕಟ, ಹೊಟ್ಟೆ ಕಿಚ್ಚನ್ನು ವ್ಯಕ್ತಪಡಿಸುವಾಗ ಬೈಗುಳದ ರೂಪ ಪಡೆದುಕೊಳ್ಳುತ್ತದೆ ಎಂದು ಹೇಳಿದರು. ಬೈಗುಳವನ್ನು ಕೆಟ್ಟದು ಎಂದು ಹೇಳುತ್ತಾರೆ. ಆದರೆ, ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ಮನಶಾಸ್ತçಜ್ಞರು, ಸಮಾಜ ಶಾಸ್ತçಜ್ಞರು ಬೈಗುಳದ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಸಮಾಜ ನೆಮ್ಮದಿಯಾಗಿರಲು ಕಾರಣವೇನೆಂದು ಅರಿಯುವ ಸಂದರ್ಭದಲ್ಲಿ ಬೈಗುಳ ಕೂಡ ಒಂದು ಕಾರಣವೆಂದು ತಿಳಿದುಬಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೊರತರಲಾಗಿರುವ ಬೈಗುಳ ಬರಹ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಕಿ, ಸಾಹಿತಿ ಸುನಿತಾ ಕುಶಾಲನಗರ, ಮನಸು ಉದ್ರೇಕಗೊಂಡಾಗ ಬೈಗುಳಗಳು ಬರುತ್ತವೆ. ಆದರೆ ಪದ ಬಳಕೆ ಮಾಡುವ ಸಂದರ್ಭದಲ್ಲಿ ಎಚ್ಚರವಿರಬೇಕು. ಮತ್ತೊಬ್ಬರಿಗೆ ಮಾನಸಿಕ ಹಿಂಸೆ ಆಗುವಂತಹ ಪದಗಳನ್ನು ಬಳಸಬಾರದೆಂಬ ವಿವೇಚನೆ ಇರಬೇಕು. ಕೆಲವೊಂದು ಪದಗಳನ್ನು ಮಕ್ಕಳ ಮೇಲೆ ಪ್ರಯೋಗ ಮಾಡುವದು ಅಪಾಯಕಾರಿಯೂ ಆಗಬಹುದೆಂದು ಹೇಳಿದರು. ಸದಾ ಹಿತವನ್ನು ಕೊಡುವದು ಸಾಹಿತ್ಯವಾಗಿದೆ. ಬೈಗುಳವೂ ಒಂದು ಸಾಹಿತ್ಯವಾದರೆ ಬೈಗುಳವೂ ಹಿತ ಕೊಡುತ್ತದಾ ಎಂಬ ಪ್ರಶ್ನೆ ಕಾಡುವದು ಸಹಜ, ಇಂತಹ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊಡಗಿನ ಪ್ರಥಮ ಬೈಗುಳ ಸಾಹಿತಿ ಅಂಜಪರವAಡ ರಂಜು ಮುತ್ತಪ್ಪ ಹಾಗೂ ಗಾಯಕಿ ಕಬ್ಬಚ್ಚಿರ ರಶ್ಮಿ, ಸುನಿತಾ, ಮಾದೆಟ್ಟಿರ ಬೆಳ್ಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಅಲ್ಲಾರಂಡ ರಂಗ ಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಇದ್ದರು. ವೇದಿಕೆಯ ಪದಾಧಿಕಾರಿ ಹೇಮಲತಾ ಪೂರ್ಣಪ್ರಕಾಶ್ ಸ್ವಾಗತಿಸಿದರೆ, ಯಶೋಧ ನಿರೂಪಿಸಿದರು. ಬೊಟ್ಟೋಳಂಡ ನಿವ್ಯಾ ದೇವಯ್ಯ ಹಾಗೂ ಉಳುವಂಗಡ ಗಾಯನ ಸನ್ಮಾನಿತರನ್ನು ಪರಿಚಯಿಸಿದರು. ಟಿ.ಆರ್. ವಿನೋದ್ ವಂದಿಸಿದರು.