ಪಾಲಿಬೆಟ್ಟ, ನ. ೨೪: ಕ್ರೆöÊಸ್ತ ಮಿಷಿನರಿಗಳು ನಮ್ಮ ದೇಶದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ವೀರಾಜಪೇಟೆ ತಾಲೂಕು ಶಿಕ್ಷಣ ಅಧಿಕಾರಿ ಪ್ರಕಾಶ್ ಅಭಿಪ್ರಾಯಿಸಿದ್ದಾರೆ.

ಅಮ್ಮತ್ತಿ ಗುಡ್‌ಶಫರ್ಡ್ ಶಾಲೆಯ ೫೮ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಗುಡ್‌ಶಫರ್ಡ್ ಶಾಲೆಯು ಶಿಸ್ತುಬದ್ಧ ಶಿಕ್ಷಣ ನೀಡುತ್ತಾ ಬರುತ್ತಿದ್ದು, ಕಳೆದ ೫೮ ವರ್ಷಗಳಿಂದ ಹಲವಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಂಸ್ಥೆಯ ಪಾತ್ರ ಮತ್ತು ಶ್ರಮವಿದೆ ಎಂದರು.

ಅಮ್ಮತ್ತಿ ಸಂತ ಅಂತೋಣಿ ದೇವಾಲಯದ ಧರ್ಮಗುರು ರೆವರೆಂಡ್ ಫಾದರ್ ರೇಮಂಡ್ ಮಾತನಾಡಿ, ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಪೋಷಕರ ಜವಾಬ್ದಾರಿಯು ಇಮ್ಮಡಿಯಾಗಲಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಪಾಠ ಪ್ರವಚನಗಳ ಬಗ್ಗೆ ಮನೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಹಾಗೆ ಮಾಡಿದ್ದಲ್ಲಿ ಶಿಕ್ಷಕರ ಶ್ರಮಕ್ಕೆ ಫಲ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳ ಮೊಬೈಲ್ ಬಳಕೆಯ ದುಷ್ಪರಿಣಾಮ, ಪರಿಸರ ನಾಶ, ವಿವಿಧತೆಯಲ್ಲಿ ಏಕತೆ ಸಾರುವ ಸಂದೇಶಗಳನ್ನು ಒಳಗೊಂಡ ಕಲಾ ಪ್ರದರ್ಶನಗಳು ಗಮನ ಸೆಳೆಯಿತು. ಸಾವಿರಾರು ಜನ ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಶಿಕ್ಷಣ ಅಧಿಕಾರಿ ಪ್ರಕಾಶ್, ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ವನಜಾಕ್ಷಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರ, ಅಮ್ಮತ್ತಿ ಸಂತ ಅಂತೋಣಿ ದೇವಾಲಯದ ಧರ್ಮ ಗುರು ರೆವರೆಂಡ್ ಫಾದರ್ ರೇಮಂಡ್, ಗುಡ್ ಶಫರ್ಡ್ ಶಾಲಾ ವ್ಯವಸ್ಥಾಪಕಿ ಸಿಸ್ಟರ್ ಎಲಿಜಬೆತ್, ಪ್ರಾಂಶುಪಾಲೆ ಸಿಸ್ಟರ್ ಜೆಸ್ಸಿ ಜೋಸೆಫ್ ಮತ್ತಿತರರಿದ್ದರು.