ಸೋಮವಾರಪೇಟೆ, ನ. ೨೪: ಶ್ರೀ ರವಿಶಂಕರ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾ. ೨೪ ರಿಂದ ೩೦ ರವರೆಗೆ ೭ ದಿನಗಳ ಕಾಲ ತಾಲೂಕಿನ ಪುಷ್ಪಗಿರಿಯ ಶ್ರೀ ಶಾಂತಮಲ್ಲಿಕಾರ್ಜುನ ದೇವಸ್ಥಾನದ ಸಭಾಂಗಣದಲ್ಲಿ ಯುವ ನಾಯಕತ್ವ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ, ತಾಲೂಕಿನ ಪುಷ್ಪಗಿರಿಯ ಶ್ರೀ ಶಾಂತಮಲ್ಲಿಕಾರ್ಜುನ ದೇವಸ್ಥಾನದ ಸಭಾಂಗಣದಲ್ಲಿ ಶಿಬಿರ ಆಯೋಜಿಸಲಾಗಿದೆ. ಹಿರಿಯ ಅನುಭವಿ ಶಿಕ್ಷಕರುಗಳಾದ ಯಾದಗಿರಿ ಜಿಲ್ಲೆಯ ಹನುಮಂತ ರೆಡ್ಡಿ ಮತ್ತು ಮಂಗಳೂರಿನ ಉದಯಕುಮಾರ ಅವರು ಯುವ ನಾಯಕತ್ವ ತರಬೇತಿ ನೀಡಲಿದ್ದಾರೆ ಎಂದರು.
೧೮ ವರ್ಷ ಮೇಲ್ಪಟ್ಟ ಯುವಕ ಯುವತಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಯುವ ಶಕ್ತಿಗೆ ತಮ್ಮಲ್ಲಿರುವ ಶಕ್ತಿ, ಜವಾಬ್ದಾರಿ, ಜೀವನ ಮಾರ್ಗದ ಬಗ್ಗೆ ದಾರಿ ತೋರಿಸಿ ಅವರನ್ನು ಸಮಾಜದ ಅತ್ಯಂತ ಸದೃಢ ವ್ಯಕ್ತಿಯನ್ನಾಗಿಸಿ ಸಮಾಜಮುಖಿ ಕೆಲಸ ಮಾಡುವಂತೆ ಪ್ರೇರೇಪಿಸುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಶಿಬಿರ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೪೫೯೮೭೭೧೭ ನ್ನು ಸಂಪರ್ಕಿಸಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮೃತ್ಯುಂಜಯ, ಬಿ.ಪಿ. ಶಿವಕುಮಾರ್ ಹಾಗೂ ಅನಿತಾ ಆನಂದ್ ಇದ್ದರು.