ಪೊನ್ನಂಪೇಟೆ, ನ. ೨೨: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿರುಗೂರು ಗ್ರಾಮದಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸಾವಿಗೀಡಾಗಿರುವ ಘಟನೆ ನಡೆದಿದೆ. ಕಾನೂರು ಸಮೀಪದ ಬ್ರಹ್ಮಗಿರಿ ಪೈಸಾರಿಯ ನಿವಾಸಿ ಶಶಿಕುಮಾರ್ (೨೨) ಮೃತ ದುರ್ದೈವಿ. ಬೈಕ್ ಸವಾರ ಇಂದು ಬೆಳಿಗ್ಗೆ ಸುಮಾರು ೯.೩೦ ರ ಸಮಯದಲ್ಲಿ ಪೊನ್ನಂಪೇಟೆ ಕಡೆಯಿಂದ ಬಾಳೆಲೆಗೆ ತೆರಳುತಿದ್ದ ಸಂದರ್ಭ, ಬಾಳೆಲೆ ಕಡೆಯಿಂದ ಪೊನ್ನಂಪೇಟೆ ಕಡೆಗೆ ಬರುತಿದ್ದ ನಿಟ್ಟೂರು ಗ್ರಾಮದ ಅಳಮೇಂಗಡ ಬೋಸ್ ಮಂದಣ್ಣ ಎಂಬವರ ವ್ಯಾಗನರ್ ಕಾರು (ಕೆ.ಎ.೧೨. ಎಂಎ ೪೧೧೮) ಮತ್ತು ಬೈಕ್ (ಕೆ.೧೨ ವಿ ೪೮೯೨) ನಡುವೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಶಿಕುಮಾರ್ ಅನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೃತ ಶಶಿ ಕುಮಾರ್ ಬಾಳೆಲೆ ಜಾನಕಿ ಮಿಲ್‌ನಲ್ಲಿ ಚಾಲಕ ವೃತ್ತಿ ನಿರ್ವಹಿಸುತಿದ್ದನು. ಘಟನೆಯ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದ ರಾಜು, ಪೊನ್ನಂಪೇಟೆ ಸಬ್ ಇನ್ಸ್ಪೆಕ್ಟರ್ ನವೀನ್, ಪೊಲೀಸ್ ಸಿಬ್ಬಂದಿ ಪ್ರಸನ್ನ ಹರೀಶ್, ಬಾಳಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.