ಸಂಸದ ಪುತ್ರನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಬೆಂಗಳೂರು, ನ. ೧೭: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ಅವರು ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪ ಕೇಳಿಬಂದಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಅವರ ವಿರುದ್ಧ ಬೆಂಗಳೂರು ಮೂಲದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಿಸಿಕೊಂಡು ಇದೀಗ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಂದೂವರೆ ವರ್ಷದ ಹಿಂದೆ ಪಾರ್ಟಿವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿರುವ ರಂಗನಾಥ್, ಬಳಿಕ ಮೈಸೂರಿನ ಹೊಟೇಲ್‌ನಲ್ಲಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಇಬ್ಬರಿಗೂ ನೋಟೀಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಬರುವಂತೆ ರಂಗನಾಥ್ ಅವರಿಗೆ ನೋಟೀಸ್ ನೀಡಲಾಗಿದೆ ಮತ್ತು ಯುವತಿಗೆ ಸೂಕ್ತ ದಾಖಲೆ ಸಮೇತ ಠಾಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ. ರಂಗನಾಥ್ ಅವರು ಸಹ ಯುವತಿ ವಿರುದ್ಧ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ನನ್ನ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಇಟ್ಟುಕೊಂಡು ಯುವತಿ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, ೧೫ ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಎಂದು ಆರೋಪಿಸಿದ್ದಾರೆ.

ಜೆಡಿಎಸ್‌ನಿಂದ ಸಿ.ಎಂ. ಇಬ್ರಾಹಿಂ ಅಮಾನತ್ತು

ಬೆಂಗಳೂರು, ನ. ೧೭: ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿ.ಎಂ. ಇಬ್ರಾಹಿಂ ಅವರನ್ನು ಕೂಡಲೇ ಜಾರಿಗೆ ಬರುವಂತೆ ಜಾತ್ಯತೀತ ಜನತಾದಳ ಪಕ್ಷದಿಂದ ಅಮಾನತ್ತು ಮಾಡಿ, ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ. ಸಿ.ಎಂ. ಇಬ್ರಾಹಿಂರವರು ಸಾರ್ವಜನಿಕವಾಗಿ ಪಕ್ಷದ ರಾಷ್ಟಾçಧ್ಯಕ್ಷರ, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ, ಪಕ್ಷದ ರಾಜ್ಯ ಪರಿಷತ್, ಶಾಸಕಾಂಗ ಪಕ್ಷದ ಸಭೆ, ಕೋಡ್ ಸಮಿತಿ ಮುಂತಾದ ಸಭೆಗಳಲ್ಲಿ ಒಮ್ಮತದ ನಿರ್ಣಯವಾಗಿದ್ದರೂ ಸಹ ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷದ ಹಿತಕ್ಕೆ ಧಕ್ಕೆ ತಂದಿರುತ್ತಾರೆ. ಇಂತಹ ನಡವಳಿಕೆ ಮತ್ತು ಹೇಳಿಕೆಗಳು ಪಕ್ಷದ ವಿರೋಧಿ ಚಟುವಟಿಕೆಗಳಾಗಿರುತ್ತವೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪಬ್ಲಿಕ್ ಎಗ್ಸಾಮಿನೇಷನ್ ವಿಧೇಯಕ ಮಂಡನೆ-ಸಿದ್ದರಾಮಯ್ಯ

ಬೆAಗಳೂರು, ನ. ೧೭: ಕರ್ನಾಟಕ ಪಬ್ಲಿಕ್ ಎಗ್ಸಾಮಿನೇಷನ್ (ಭ್ರಷ್ಟಾಚಾರ ಮತ್ತು ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ - ೨೦೨೩ಕ್ಕೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಈ ವಿಧೇಯಕವನ್ನು ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್.ಡಿ.ಎ ಸೇರಿದಂತೆ ಸರ್ಕಾರದ ಹಲವು ನೇಮಕಾತಿಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದವು. ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ನೂತನ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜ. ೨೨ ರಂದು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ

ಮಂಗಳೂರು, ನ. ೧೭: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಜನವರಿ ೨೨ರಂದು ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಒಂದು ದಿನದ ನಂತರ ಭಕ್ತರು ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಮತ್ತು ಉಡುಪಿ ಪೇಜಾವರ ಮಠದ ಮುಖ್ಯಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥರು ಗುರುವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ೨೨ ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಭಿಜಿತ್ ಮುಹೂರ್ತದಲ್ಲಿ ದೇವಸ್ಥಾನದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಭದ್ರತಾ ಕಾರಣಗಳಿಗಾಗಿ ದೇಗುಲ ಲೋಕಾರ್ಪಣೆ ದಿನದಂದು ಆಹ್ವಾನಿತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.

ಜಮೀರ್ ಹೇಳಿಕೆಗೆ ಬಿಜೆಪಿ ಆಕ್ಷೇಪ

ಬೆಂಗಳೂರು, ನ. ೧೭: ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿಯವರು ನಮಸ್ಕಾರ ಸಾಬ್ ಎಂದು ಕೈ ಮುಗಿದು ನಿಲ್ಲುವಂತೆ ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ವಸತಿ ಸಚಿವ ಜಮೀರ್ ಅಹಮದ್ ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ನೀಡಿರುವ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಮತೀಯ ಲೇಪನ ಹಚ್ಚಿರುವುದು ಖಂಡನೀಯ, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಎಂ.ಪಿ. ರೇಣುಕಾಚಾರ್ಯ, ಬಿಜೆಪಿಯ ಮಾಜಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜಮೀರ್ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ.