ಮಡಿಕೇರಿ, ನ. ೧೫: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಯಮುನಾ ಚಂಗಪ್ಪ, ಕೃಷಿ ಉಪಯೋಗಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ವೆಚ್ಚ ಭರಿಸಬೇಕು ಎಂಬ ಆದೇಶವನ್ನು ಹಿಂಪಡೆದುಕೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಅತಿವೃಷ್ಠಿಯಿಂದ ರೈತರು ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರೊಂದಿಗೆ ರಾಜ್ಯಸರ್ಕಾರ ಕೃಷಿ ಉಪಯೋಗಕ್ಕೆ ವಿದ್ಯುತ್ ಸಂಪರ್ಕ (ಪಂಪ್ಸೆಟ್ ನಿರ್ಮಾಣಕ್ಕೆ) ಪಡೆಯಲು ರೈತರೇ ವೆಚ್ಚ ಬರಿಸಬೇಕು ಎಂಬ ಆದೇಶದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭ ರೈತರು ಕೇವಲ ೨೪ ಸಾವಿರ ನೀಡಿದ್ದಲ್ಲಿ ಉಳಿದ ವೆಚ್ಚವನ್ನು ಸರ್ಕಾರವೇ ಬರಿಸುತ್ತಿತ್ತು. ಆದರೆ, ಅತಿವೃಷ್ಠಿಯ ಸಮಯದಲ್ಲಿ ಇಂದು ೨ ಲಕ್ಷಕ್ಕೂ ಅಧಿಕ ವೆಚ್ಚವನ್ನು ರೈತರು ಭರಿಸುವುದು ಕಷ್ಟದ ವಿಚಾರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ನೂತನ ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಒಂದು ತಿಂಗಳ ಒಳಗೆ ಹಿಂಪಡೆದುಕೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ರೈತರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ರಾಜ್ಯ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳು ಹಳ್ಳ ಹಿಡಿಯುತ್ತಿದೆ. ಇದೊಂದು ದಂಧೆ ಎಂದು ಆರೋಪಿಸಿದ ಅವರು, ಗ್ಯಾರೆಂಟಿ ಯೋಜನೆಗಳು ಬಡವರಲ್ಲಿ ಖರೀದಿ ಮಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಮಡಿಕೇರಿ ಗ್ರಾಮಾಂತರ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಜಗದೀಶ್ ಮಾತನಾಡಿ, ಇಂದು ಕಾಡಾನೆಗಳ ಹಾವಳಿ ಮಿತಿಮೀರಿದೆ. ಬಲ್ಲಮಾವಟಿ, ಕುಂಜಿಲ, ಚೇಲಾವಾರ ಇತ್ಯಾದಿ ಭಾಗಗಳಲ್ಲಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ಮಂಡಲ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ ಇದ್ದರು.