ಕೂಡಿಗೆ, ನ. ೧೫: ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂತರ್ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಹೆಬ್ಬಾಲೆಯ ಸಂಯುಕ್ತ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮೈಸೂರಿನ ಉದ್ಯಮಿ ಹೆಚ್.ಕೆ. ಪ್ರಸನ್ನ ನೆರವೇರಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಅತಿಥಿಯಾಗಿದ್ದ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ನದಿ ಸಂರಕ್ಷಣೆ, ಸ್ವಚ್ಛತೆ, ಗಿಡಮರಗಳನ್ನು ಉಳಿಸಿ ಬೆಳೆಸುವುದರಿಂದಾಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆ.ವಿ. ಶಿವಪ್ಪ ವಹಿಸಿದರು. ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಲ್. ರಮೇಶ್, ಕಣಿವೆಯ ಸಾಹಿತಿ ಭಾರಧ್ವಜ ಆನಂದತೀರ್ಥ, ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಯತೀಶ್, ನಿವೃತ್ತ ಶಿಕ್ಷಕರಾದ ಹೆಚ್.ಎನ್. ಲೋಕೇಶ್, ಜಯಮ್ಮ, ಟಿ.ಜಿ. ಗಿರೀಶ್, ಎಂ.ಕೆ. ವಿಜಯಕುಮಾರ್, ಬಸವರಾಜಶೆಟ್ಟೆ, ಉಮೇಶ್, ಹಿರಿಯ ವಿದ್ಯಾರ್ಥಿ ಮಮತ, ದಿನೇಶಾಚಾರಿ, ಕನ್ನಡ ಅಧ್ಯಾಪಕ ವೆಂಕಟನಾಯಕ್, ಹಿಂದಿ ಭಾಷಾ ಶಿಕ್ಷಕಿ ಡಿ. ಕವಿತ, ಎ.ಆರ್. ಯೋಗೇಶ್ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತೊರೆನೂರು ಶಾಲೆ ನಂದಿತ, ದ್ವಿತೀಯ ಸ್ಥಾನ ನವೀತಾ, ದರ್ಶನ್. ಭಾಷಣ ಸ್ಪರ್ಧೆಯಲ್ಲಿ ಕೂಡಿಗೆ ಮೊರಾರ್ಜಿ ದೇಸಾಯಿ ಶಾಲೆಯ ಗಾನವಿ ಪ್ರಥಮ, ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ಗೌತಮಿ ದ್ವಿತೀಯ. ಕಾಲೇಜು ವಿಭಾಗದಲ್ಲಿ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಟಿ.ಜಿ. ಪಲ್ಲವಿ ಪ್ರಥಮ, ಶಿರಂಗಾಲದ ಎಸ್.ಆರ್. ರಕ್ಷಿತಾ ದ್ವಿತೀಯ, ಭಾಷಣ ಸ್ಪರ್ಧೆಯಲ್ಲಿ ಹೆಬ್ಬಾಲೆ ಪದವಿಪೂರ್ವ ಕಾಲೇಜಿನ ಭೂಮಿಕ ಪ್ರಥಮ, ಸಂಗೀತ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.