ಸಿದ್ದಾಪುರ, ನ. ೧೫: ಬಾಡಗ ಬಾಣಂಗಾಲ ಗ್ರಾಮದಲ್ಲಿ ವೃದ್ಧ ಮಹಿಳೆಯನ್ನು ಹತ್ಯೆ ಮಾಡಿದ್ದ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಕಳೆದ ಎರಡು ತಿಂಗಳ ಹಿಂದೆ ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಲಗವನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಸಲಗವನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸಲಗದ ಚಲನ ವಲನ ಕಂಡುಹಿಡಿಯಲು ಹಗಲಿರುಳು ಶ್ರಮಿಸಿದ್ದರು. ಆದರೆ, ಸಲಗವು ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸಿ ಓಡಾಡುತ್ತಾ ಮಾನವನ ಹಾಗೂ ವಾಹನಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿತ್ತು. ಇತ್ತೀಚೆಗೆ ಅರಣ್ಯ ಸಚಿವರು ಬಾಡಗ - ಬಾಣಂಗಾಲ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು.
(ಮೊದಲ ಪುಟದಿಂದ) ಆದರೆ, ಆಗಿಂದಾಗ್ಗೆ ಮಳೆ ಬರುತ್ತಿದ್ದ ಕಾರಣ ಹಾಗೂ ಸಾಕಾನೆಗಳು ದಸರಾ ಉತ್ಸವಕ್ಕೆ ಮೈಸೂರಿಗೆ ತೆರಳಿದ್ದು ದರಿಂದಾಗಿ ತಡವಾಗಿತ್ತು. ಇದೀಗ ಅರಣ್ಯ ಇಲಾಖಾಧಿಕಾರಿಗಳು ವೀರಾಜಪೇಟೆ ವಲಯ ಡಿಸಿಎಫ್ ಶರಣ ಬಸಪ್ಪ ಅವರ ಮಾರ್ಗದರ್ಶನದಲ್ಲಿ ಸಲಗವನ್ನು ಹುಡುಕುತ್ತಿದ್ದಾರೆ. ಆದರೆ, ಸಲಗವು ಕಾರ್ಯಾಚರಣೆಯ ತಂಡದ ಕಣ್ಣು ತಪ್ಪಿಸಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿದ್ದು, ಸದ್ಯದಲ್ಲೇ ಸಲಗವನ್ನು ಸೆರೆಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. -ವಾಸು.