ಸೋಮವಾರಪೇಟೆ, ನ. ೧೩: ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸುರಿಯಬೇಕಿದ್ದ ಮಳೆ ಆಗೊಮ್ಮೆ ಈಗೊಮ್ಮೆ ಎಂಬAತೆ ಸುರಿದಿದ್ದು, ಮಳೆಗಾಲದಲ್ಲಿ ಬಿರು ಬೇಸಿಗೆಯ ವಾತಾವರಣದಿಂದಾಗಿ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ನಿರೀಕ್ಷಿತ ಉತ್ಪಾದನೆ ಕಂಡಿಲ್ಲ. ಈ ನಡುವೆ ಅಕಾಲಿಕ ಮಳೆಯಿಂದಾಗಿ ಅವಧಿಪೂರ್ವ ಕಾಫಿ ಹಣ್ಣಾಗಿದ್ದು, ಬೆಳೆಗಾರರು ನಷ್ಟದ ಹಾದಿಯಲ್ಲಿದ್ದಾರೆ.
ಆರಂಭದಲ್ಲಿ ಹೂಮಳೆ ಉತ್ತಮವಾಗಿ ಬಿದ್ದಿದ್ದು, ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು, ನಂತರದ ಮಳೆಗಾಲದಲ್ಲಿ ಬರದ ಛಾಯೆಗೆ ಸಿಲುಕಿದರು. ಇಷ್ಟೆಲ್ಲಾ ಆದರೂ ಗಿಡಗಳಲ್ಲಿ ಉಳಿದುಕೊಂಡಿದ್ದ ಕಾಫಿಗೆ, ಇದೀಗ ವಾಯುಭಾರ ಕುಸಿತದ ಮೂಲಕ ವರುಣನ ಅವಕೃಪೆ ಎದುರಾದ್ದರಿಂದ ಮತ್ತೆ ಸಮಸ್ಯೆಗೆ ಸಿಲುಕುವಂತಾಗಿದೆ.
ಅರೇಬಿಕಾವನ್ನು ಹೆಚ್ಚು ಬೆಳೆಯುವ ಉತ್ತರ ಕೊಡಗಿನಾದ್ಯಂತ ಈ ಬಾರಿಯೂ ಫಸಲು ನಷ್ಟ ಸಂಭವಿಸುತ್ತಿದ್ದು, ಮಳೆ-ಬಿಸಿಲಿನ ವಾತಾವರಣದಿಂದಾಗಿ ಕಾಫಿ ಫಸಲು ಗಿಡಗಳಲ್ಲಿ ಹಣ್ಣಾಗಿದೆ. ಇತ್ತ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಿ ಒಣಗಿಸಲೂ ಆಗದೇ, ಅತ್ತ ಗಿಡಗಳಲ್ಲಿ ಬಿಟ್ಟುಕೊಳ್ಳಲೂ ಆಗದೇ ಬೆಳೆಗಾರರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಕಳೆದ ಒಂದು ವಾರದಿಂದ ಆಗಾಗ್ಗೆ ಧಾರಾಕಾರ ಮಳೆಯಾಗುವುದು, ನಂತರ ಬಿಸಿಲಿನ ವಾತಾವರಣ ಉಂಟಾಗುತ್ತಿದ್ದು, ಕಾಫಿ ಗಿಡಗಳಲ್ಲಿ ಶೇ. ೧೫ ರಿಂದ ೨೦ರಷ್ಟು ಕಾಯಿಗಳು ಹಣ್ಣಾಗಿವೆ. ಬೋರರ್ ಗಿಡದ ಹಾವಳಿ ತಡೆಗಟ್ಟಲು ಕಾಫಿ ತೋಟದಲ್ಲಿ ನೆರಳು ಬಿಟ್ಟುಕೊಂಡಿದ್ದ ಬೆಳೆಗಾರರು ಇದೀಗ ಸಂಕಟಪಡುವAತಾಗಿದೆ. ತೋಟದಲ್ಲಿ ಶೀತದ ವಾತಾವರಣ ಹೆಚ್ಚಾಗಿದ್ದು, ಹಣ್ಣು ಕಾಫಿ ನೆಲಕ್ಕಚ್ಚುತ್ತಿವೆ.
ನೆಲಕ್ಕಚ್ಚಿದ ಹಣ್ಣು ಕಾಫಿಯನ್ನು ಸಂಗ್ರಹಿಸಲೂ ಸಹ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ತೋಟದಲ್ಲಿರುವ ಕಳೆಗಳನ್ನು ತೆರವುಗೊಳಿಸಿಲ್ಲ. ಕ್ರಿಮಿನಾಶಕವನ್ನೂ ಸಿಂಪಡಿಸಿಲ್ಲ. ಈ ಹಂತದಲ್ಲಿ ತೋಟದೊಳಗೆ ಕೆಲಸಕ್ಕೆಂದು ತೆರಳಿದರೆ ಗಿಡಗಳಲ್ಲಿರುವ ಹಣ್ಣು-ಕಾಯಿ ಕಾಫಿ ಫಸಲು ನೆಲಕ್ಕಚ್ಚುತ್ತಿವೆ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕಾಫಿ ಬೆಳೆಗಾರರ ಮೊಗದಲ್ಲಿ ಹರ್ಷ ಮೂಡಿಸುವ ಬದಲು ಮತ್ತೆ ಚಿಂತೆಯ ಗೆರೆಗಳನ್ನು ಎಳೆದಿದೆ. ಪ್ರತಿ ವರ್ಷವೂ ಒಂದಿಲ್ಲೊAದು ಸಮಸ್ಯೆಗೆ ಅರೇಬಿಕಾ ಬೆಳೆಗಾರರು ಸಿಲುಕುತ್ತಿದ್ದು, ಇದರ ಪರಿಣಾಮ ಬಹುತೇಕ ಅರೇಬಿಕಾ ತೋಟಗಳಲ್ಲಿ ರೋಬಸ್ಟಾ ಗಿಡಗಳು ತಲೆ ಎತ್ತುತ್ತಿವೆ.