ಚೆಯ್ಯಂಡಾಣೆ, ನ. ೧೦: ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಾಪೋಕ್ಲು ಗ್ರಾಮ ಪಂಚಾಯಿತಿ, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆ ಕೊಡಗು ಹಾಗೂ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಇವರ ಸಂಯುಕ್ತ ಆಶ್ರಯದಲ್ಲಿ ಬೇತು ಗ್ರಾಮದ ಊರ್ ಮಂದ್‌ನಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಸಾಕು ನಾಯಿಗಳಿಗೆ ರೇಬಿಸ್ ಲಸಿಕಾ ಶಿಬಿರ ನಡೆಯಿತು.

ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಸಾಬಾ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಉದ್ಘಾಟಿಸಿದರು. ಕೊಡಗು ಜಿಲ್ಲಾ ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ. ಪ್ರಸನ್ನ, ಜಾನುವಾರುಗಳ ವೈಜ್ಞಾನಿಕ ಸಾಕಾಣಿಕೆ ಬಗ್ಗೆ ಹಾಗೂ ಇಲಾಖೆಯ ವಿವಿಧ ಹೊಸ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ೬೫ ನಾಯಿಗಳಿಗೆ ರೇಬಿಸ್ ಮುಂಜಾಗ್ರತಾ ಲಸಿಕೆ, ೩೫ ಹಸುಗಳಿಗೆ ಮತ್ತು ೪ ಬೆಕ್ಕುಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ೧೩ ಉತ್ತಮ ರಾಸುಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭ ನಾಪೋಕ್ಲು ಪಶು ಆಸ್ಪತ್ರೆಯ ವೈದ್ಯೆ ಡಾ. ಶಿಲ್ಪಾ, ಸಿಬ್ಬಂದಿಗಳಾದ ನವೀನ್, ಸುನಿಲ್, ಗುರುರಾಜ್ ಹಾಗೂ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.