ವೀರಾಜಪೇಟೆ, ನ. ೧೦: ಕಾಫಿ ತೋಟ ಮತ್ತು ಬೆಳೆ ಬೆಳೆದ ಗದ್ದೆಗಳಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟಹೊಂದಿರುವ ಗ್ರಾಮಸ್ಥರು ಇದೀಗ ರಸ್ತೆ ತಡೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೊಕ್ಲು ಗ್ರಾಮದ ಪ್ರದೇಶಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ನಿರಂತರವಾಗಿ ಫಸಲು ನೀಡುತ್ತಿರುವ ಗದ್ದೆಗಳಿಗೆ ಲಗ್ಗೆಯಿಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಮಾಡುತ್ತಿವೆ. ಕಾಫಿ ತೋಟಗಳು ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಕಾರ್ಮಿಕರು ಬಾರದೆ ಹಿಂದೇಟು ಹಾಕುತ್ತಿದ್ದಾರೆ. ಭಯದ ವಾತಾವರಣ ಸೃಷ್ಟಿಯಾಗಿದೆ. ತೋಟದ ಅಂಚಿನಲ್ಲಿ ಕೆಲವು ಮನೆಗಳಿಂದ ಹೊರಗೆ ಬಾರದಿರುವ ಸ್ಥಿತಿ ಸೃಷ್ಟಿಯಾಗಿದೆ. ಹಲವು ಬಾರಿ ಕಾಡಾನೆಗಳ ನಿಯಂತ್ರಣ ಮಾಡುವಂತೆ ಮನವಿ ಮಾಡಿದರೂ ಅರಣ್ಯ ಇಲಾಖೆಯು ಅರ್ಜಿಯನ್ನು ಸ್ವೀಕರಿಸಿ ಸ್ಥಳಕ್ಕೆ ಆಗಮಿಸಿ ಚಿತ್ರ ಪಡೆದುಕೊಂಡು ಮರಳಿ ಹೋಗುತ್ತಿದೆ ಹೊರತು ಪರಿಹಾರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಕಾಡಾನೆ ಮತ್ತು ಇತರ ವನ್ಯಮೃಗಗಳ ಸಮಸ್ಯೆಗಳ ಕುರಿತಾಗಿ ದೂರು ಅರ್ಜಿಯನ್ನು ಬಿಳುಗುಂದ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ನೀಡಿದರು. ಕಾಡಾನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡದಿದ್ದಲ್ಲಿ ಅರಣ್ಯ ಇಲಾಖೆಯ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರ ಧರಣಿ ಮತ್ತು ವೀರಾಜಪೇಟೆ ಸಿದ್ದಾಪುರ ಮಾರ್ಗ ರಸ್ತೆಯನ್ನು ತಡೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಈ ಸಂದÀರ್ಭ ಗ್ರಾಮಸ್ಥರಾದ ಮಂಡೇಡ ಆಕಾಶ್, ಮಂಡೇಡ ರಾಜ ದೇವಯ್ಯ, ಗಿರೀಶ್ ಕಾವೇರಪ್ಪ, ಜೀವನ್, ಅಯ್ಯಪ್ಪ, ಮುಕ್ಕಾಟೀರ ಯೋಗೇಶ್ ನೆಲ್ಲಚಂಡ ನಾಚಪ್ಪ, ಬೆಳ್ಯಪ್ಪ, ದುದ್ದಿಯಂಡ ಹುಸೈನ್, ಶೀರಾಜುದ್ದೀನ್, ಮತ್ತು ಚೋಕಂಡಳ್ಳಿ, ನಲ್ವತೋಕ್ಲು ಬಾಚೆಟ್ಟಿ ಕೆಂದೋಣಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.

-ಕಿಶೋರ್‌ಕುಮಾರ್ ಶೆಟ್ಟಿ

ಗ್ರಾಮವು ಸುಮಾರು ೨೦ ವರ್ಷಗಳಿಂದ ಕಾಡಾನೆಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಗ್ರಾಮದಲ್ಲಿ ಬಹುತೇಕ ಮಂದಿ ರೈತಾಪಿ ವರ್ಗಕ್ಕೆ ಸೇರಿದ್ದು, ಬೆಳೆಯನ್ನು ನಂಬಿ ಜೀವನ ಸಾಗಿಸುತಿದ್ದಾರೆ. ಕಾಡಾನೆಗಳ ನಿರಂತರ ದಾಳಿಯಿಂದಾಗಿ ಗದ್ದೆಗಳಲ್ಲಿ ಫಸಲು ಬೆಳೆಯಲು ರೈತರು ಗದ್ದೆಗಳನ್ನು ಪಾಳು ಬಿಡುವ ಪರಿಸ್ಥಿತಿ ಎದುರಾಗಿದೆ. ಅರಣ್ಯ ಇಲಾಖೆಯು ಕಾಡಾನೆಗಳ ನಿಯಂತ್ರಣ ಮಾಡಬೇಕು. ಇಲ್ಲದೆ ಹೋದಲ್ಲಿ ಗ್ರಾಮಸ್ಥರ ಸಹಯೋಗದೊಂದಿಗೆ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ ಮಾಡುತ್ತೇವೆ.

- ಮುಕ್ಕಾಟಿರ ಸಂತೋಷ್, ಗ್ರಾಮಸ್ಥ

ಕಾಡಾನೆಗಳ ದಾಳಿಯು ಸುಮಾರು ೨೦ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ಹೆಸರಿನಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳನ್ನು ಅಟ್ಟುವುದು ಮಾಡುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಿಲ್ಲ. ಬೆಳೆಗಾರರಿಗೆ ನಷ್ಟವೇ ಹೆಚ್ಚು. ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಅಟ್ಟುವುದು ಮತ್ತು ಶಾಶ್ವತ ಪರಿಹಾರವಾಗಬೇಕು.

- ವಾಟೇರಿರ ಬೋಪಣ್ಣ