ಮಡಿಕೇರಿ, ನ. ೮: ಮಡಿಕೇರಿ ನಗರದಲ್ಲಿ ಮನೆ ಕಂದಾಯ ಸಂಗ್ರಹಣೆಯಲ್ಲಿ ನಗರಸಭೆ ಅಭೂತ ಪೂರ್ವ ಸಾಧನೆ ಮಾಡಿದ್ದು, ಪ್ರಗತಿಪರ ಕಾರ್ಯಗಳ ನಿರ್ವಹಣೆಗೆ ನಾಂದಿ ಹಾಡಿದಂತಾಗಿದೆ ಎಂದು ಮಡಿಕೇರಿ ನಗರಸಭೆಯ ಪೌರಾಯುಕ್ತರಾದ ವಿಜಯ ತಿಳಿಸಿದ್ದಾರೆ.

ಇದರನ್ವಯ ಕಳೆದ ಸೆಪ್ಟೆಂಬರ್‌ನ ಒಂದು ತಿಂಗಳಿನಲ್ಲಿಯೇ ಒಂದು ಕೋಟಿ ರೂ. ಗಳಷ್ಟು ಮನೆ ಕಂದಾಯವನ್ನು ಸಂಗ್ರಹಿಸುವುದರ ಮೂಲಕ ಗುರಿ ಸಾಧನೆ ಮಾಡಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದ್ದಾರೆ.

ನಗರಸಭೆಯಲ್ಲಿ ತಾಂತ್ರಿಕ ವಿಭಾಗವೂ ಸೇರಿದಂತೆ ವಿವಿಧ ಹುದ್ದೆಗಳ ಸಿಬ್ಬಂದಿಗಳ ಕೊರತೆ ಇದ್ದರೂ ಲಭ್ಯವಿರುವ ಸಿಬ್ಬಂದಿಗಳ ಸೇವೆಯೊಂದಿಗೆ ಸಾರ್ವಜನಿಕ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುವಂತೆ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದ ಸಾರ್ವಜನಿಕ ಅಗತ್ಯ ಬೇಡಿಕೆಗಳಲ್ಲಿ ಒಂದಾಗಿರುವ ಫಾರಂ ೩ ರ ದಾಖಲಾತಿಯನ್ನು ಶೀಘ್ರವಾಗಿ ನೀಡುವಲ್ಲಿ ಎಲ್ಲಾ ತುರ್ತು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.