ರಾಂಚಿ, ನ. ೬: ಜಾರ್ಖಂಡ್‌ನ ರಾಂಚಿಯಲ್ಲಿ ಜರುಗಿದ ೭ನೆ ಆವೃತ್ತಿಯ ಮಹಿಳಾ ಹಾಕಿ ಏಷಿಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮಹಿಳಾ ತಂಡವು ಕಳೆದ ಬಾರಿ ಚಾಂಪಿಯನ್ ಆಗಿದ್ದ ಜಪಾನ್ ವಿರುದ್ಧ ಫೈನಲ್ ಪಂದ್ಯದಲ್ಲಿ ೪-೦ ಗೋಲುಗಳಿಂದ ಗೆಲ್ಲುವ ಮೂಲಕ ಚಾಂಪಿಯನ್‌ಪಟ್ಟ ಅಲಂಕರಿಸಿದೆ.

ತಾಂತ್ರಿಕ ಸಮಸ್ಯೆಯಿಂದ ತಾ.೫ ರ ನಡುರಾತ್ರಿಯವರೆಗೂ ನಡೆದ ಪಂದ್ಯಾಟದಲ್ಲಿ ಭಾರತ ಪರ ಸಂಗೀತ ಕುಮಾರಿ, ನೇಹಾ ಗೋಯಾಲ್, ಲಾಲ್‌ರೆಂಸಿಯಾನಿ ಹಾಗೂ ವಂದನಾ ಕಟಾರಿಯಾ ಅವರುಗಳು ಕ್ರಮವಾಗಿ ಪಂದ್ಯದ ೧೭, ೪೬, ೫೭ ಹಾಗೂ ೬೦ನೆ ನಿಮಿಷಗಳಲ್ಲಿ ಗೋಲುಗಳನ್ನು ಭಾರಿಸಿ ಭಾರತವು ೨೦೧೬ರ ಬಳಿಕ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಲು ಸಹಕಾರಿಯಾದರು. ಭಾರತ ತಂಡದ ನಾಯಕಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರು ಅತ್ಯುತ್ತಮ ಗೋಲ್‌ಕೀಪಿಂಗ್ ಪ್ರದರ್ಶನ ನೀಡುವ ಮೂಲಕ ಜಪಾನ್‌ಗೆ ದೊರೆತ ೩ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ವಿಫಲಗೊಳಿಸಿದರು. ಇದಲ್ಲದೆ ಪೆನಾಲ್ಟಿ ಸ್ಟೊçÃಕ್ ಒಂದನ್ನು ಕೂಡ ರಕ್ಷಿಸಿ ಭಾರತದ ಗೆಲುವಿಗೆ ಕಾರಣಕರ್ತರಾದರು.

ಏಷಿಯಾದ ಒಟ್ಟು ೬ ಪ್ರಬಲ ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ೨೦೧೬ರಲ್ಲಿ ಸಿಂಗಾಪುರದಲ್ಲಿ ನಡೆದ ಪಂದ್ಯಾಟದಲ್ಲಿ ಭಾರತವು ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಇದೀಗ ೨ನೆ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೌತ್ ಕೊರಿಯಾ ೩ ಬಾರಿ, ಜಪಾನ್ ೨ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.