ಮಡಕೇರಿ ನ. ೬: ಮಡಿಕೇರಿ ನಗರದ ರಸ್ತೆಗಳು ತೀರಾ ಹದಗೆಟ್ಟಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ದ್ವಿಚಕ್ರ ವಾಹನ ಸವಾರರು ಕೆಲವೆಡೆ ಬಿದ್ದು ಎದ್ದು ಸಾಗುವಂತಹ ದುಸ್ಥಿತಿ ತಲುಪಿದೆ. ದಸರಾ ಸಂದರ್ಭ ಎಲ್ಲ ರಸ್ತೆಗಳನ್ನೂ ಸರಿಪಡಿಸುವುದಾಗಿ ಅಧ್ಯಕ್ಷರು, ಆಯುಕ್ತರು ನೀಡಿದ ಭರವಸೆ ಹುಸಿಯಾಗಿದೆ.

ರಾಜಾಸೀಟು ಹಿಂಭಾಗದ ರಸ್ತೆ ನಿತ್ಯ ಖಾಸಗಿ ಬಸ್‌ಗಳ ಸಂಚಾರಕ್ಕೆ ತೊಡಕುಂಟು ಮಾಡುತ್ತಿದ್ದು ಬಸ್ ಚಾಲಕರು ಬವಣೆ ಪಡುತ್ತಿದ್ದಾರೆ. ದಸರಾ ಸಂದರ್ಭ ದೇವಾಲಯಗಳ ಸಮೀಪದ ರಸ್ತೆಗಳನ್ನು ಕೂಡ ಸಮರ್ಪಕವಾಗಿ ದುರಸ್ತಿ ಮಾಡಿಲ್ಲ. ಕಂಚಿ ಕಾಮಾಕ್ಷಿ ರಸ್ತೆಯ ಮೇಲ್ಭಾಗ ರಾಜಾಸೀಟು ರಸ್ತೆಯಲ್ಲಿ ದಸರಾ ಸಂದರ್ಭ ರಸ್ತೆಯನ್ನು ಬಗೆದು ಜಲ್ಲಿ ಕಲ್ಲುಗಳನ್ನು ಹರಡಿ ಬಿಟ್ಟ ಬಳಿಕ ಗುತ್ತಿಗೆದಾರರು ನಾಪತ್ತೆÀಯಾಗಿದ್ದಾರೆ. ಇಂಜಿನಿಯರ್ ಎಲ್ಲಿದ್ದಾರೆ ಎಂದು ಹುಡುಕಬೇಕಾಗಿದೆ. ಈ ಕುರಿತು ದಸರಾ ಸಂದರ್ಭವೇ “ಶಕ್ತಿ” ಅಧ್ಯಕ್ಷರನ್ನು, ಆಯುಕ್ತರನ್ನು, ಸ್ಥಾಯೀ ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸಿ ಪ್ರಶ್ನಿಸಿದ್ದಾಗ ದಸರಾ ಮೊದಲು ಟಾರಿಂಗ್ ಮಾಡುತ್ತೇವೆ ಎಂದು ನೀಡಿದ್ದ ಭರವಸೆ ಗಾಳಿಗೆ ತೂರಲ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಕೂಡ ಮಧ್ಯೆ ಪ್ರವೇಶಿಸಿ ನಗರದ ರಸ್ತೆಗಳ ಬಗ್ಗೆ ಕಾಳಜಿ ವಹಿಸುವಂತೆ ಗಮನಕ್ಕೆ ತಂದಾಗ ತಾನು ಈ ಕುರಿತು ಸಭೆ ಕರೆದು ಚರ್ಚಿಸುವುದಾಗಿ ಭರವಸೆಯಿತ್ತಿದ್ದರು. ಮಡಿಕೇರಿ ಕ್ಷೇತ್ರದ ಶಾಸಕರ ಗಮನಕ್ಕೂ ತರಲಾಗಿತ್ತು. ಆದರೆÀ, ಇಲ್ಲಿವರೆಗೂ ಮಡಿಕೇರಿ ನಗರದ ರಸ್ತೆಗಳು ಪ್ರಪಾತಗಳ ಕೂಪಗಳಾಗಿ ಮುಂದುವರಿದಿರುವುದಕ್ಕೆ ಕೋಟೆ ಮಾರಿಯಮ್ಮ ದೇವಾಲಯದ ಬಳಿಯ ಗುಂಡಿ ಬಿದ್ದ ರಸ್ತೆಗಳೇ ಸಾಕ್ಷಿಯಾಗಿದೆ. ಮಡಿಕೇರಿ ನಗರಕ್ಕೆ ಪ್ರವಾಸಿಗರ ಆಗಮನ ಸಂಖ್ಯೆ ನಿತ್ಯವೂ ಹೆಚ್ಚುತ್ತಿದೆ. ವಾಹನಗಳ ದಟ್ಟಣೆ ಅಧಿಕಗೊಳ್ಳುತ್ತಿದೆ. ಆದರೆ, ನಗರಸಭೆ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕನಿಷ್ಟ ಸೌಲಭ್ಯವಾದ ರಸ್ತೆ ದುರಸ್ತಿ ನಡೆಸದೆ ಕಣ್ಮುಚ್ಚಿ ಕುಳಿತಿದೆ. ನಾಗರಿಕರಿಂದ ಪ್ರತಿ ವರ್ಷ ಅಧಿಕ ತೆರಿಗೆ ವಸೂಲಿ ಮಾಡಲು ಮಾತ್ರ ಆಡಳಿತಕಾರರು ಮುಂದಿದ್ದಾರೆ. ಸಭೆಗಳನ್ನು ನಡೆಸುತ್ತಾರೆ. ಯದ್ವಾ ತದ್ವಾ ಚರ್ಚೆಗಳಾಗುತ್ತವೆ. ಕೇವಲ ವೈಯಕ್ತಿಕ ದೂಷಣೆ, ಪ್ರತಿಷ್ಠೆಯ ಪ್ರಶ್ನೆಯಾಗಿ ವಿರೋಧ ಪಕ್ಷಗಳು ಸ್ವರ ಸೇರಿಸುತ್ತಿರುತ್ತವೆ. ಆದರೆ, ಅತ್ಯಂತ ಅಗತ್ಯವಾದ ರಸ್ತೆೆಗಳ ಬಗ್ಗೆ ಯಾರಿಗೂ ಗಮನವಿಲ್ಲವಾಗಿದೆ.

ನಗರೋತ್ಥಾನದ ರೂ. ನೂರು ಕೋಟಿ, ಇತರ ಅಭಿವೃದ್ಧಿ ಕಾರ್ಯಗಳಿಗೆ ಬಂದ ಹಣ, ನಾಗರಿಕರಿಂದ ಸಂಗ್ರಹವಾಗುವ ದುಬಾರಿ ತೆರಿಗೆ ಹಣ ಎಲ್ಲ್ಲಿಗೆ ಹೋಗುತ್ತಿದೆ? ಇಂತಹ ಸುಂದರ ನಗರದಲ್ಲಿ ರಸ್ತೆಗಳನ್ನು ಹದಗೆಡಿಸಿ ಇವರು ಮಾಡುತ್ತಿÀರುವ ಆಡಳಿತ ಏತಕ್ಕಾಗಿ? ಈ ಬಗ್ಗೆ ನಾಗರಿಕರೂ ಕೂಡ ಪ್ರಶ್ನಿಸುವುದನ್ನು ಮರೆತಂತಿದೆ. ಸಂಘ ಸಂಸ್ಥೆಗಳು ದೇಶದ ಯಾವದೋ ಮೂಲೆಯಲ್ಲಿ ನಡೆಯುವ ವಿಚಾರಗಳಲ್ಲಿ ಪ್ರÀತಿಭಟಿಸುತ್ತಾರೇ ಹೊರತು ನಮ್ಮ ಮನೆÉಯಂತಿರುವ ಜಿಲ್ಲೆಯ ಮುಖ್ಯಪಟ್ಟಣದತ್ತ ಕಾಳಜಿ ತೋರದಿರುವುದು ಶೋಚನೀಯ. ಮಡಿಕೇರಿ ನಗರಸಭೆ ಕೂಡಲೇ ಎಚ್ಚೆತ್ತುಕೊಳ್ಳಲಿ. ಸದಸ್ಯರುಗಳು ತಂತಮ್ಮ ವಿಭಾಗದ ರಸ್ತೆಗಳ ದುರಸ್ತಿಗೆ ಪಣ ತೊಡಲಿ. ರಸ್ತೆ ದುರಸ್ತಿ ನಡೆಸಲು ಇದು ಸಕಾಲವಾಗಿದೆ ಎಂಬದನ್ನು ಈ ಮೂಲಕ ನೆನಪಿಸಲಾಗುತ್ತಿದೆ.

-“ಚಕ್ರವರ್ತಿ”