ನವೆಂಬರ್ ೭ ವಿಶ್ವ ಕ್ಯಾನ್ಸರ್ ಜಾಗೃತಿ ದಿನ. ಈ ದಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೇಡಿಯೋಥೆರಪಿ ಚಿಕಿತ್ಸೆಗೆ ಅಗತ್ಯವಾದ ರೇಡಿಯಂ ಮತ್ತು ಪೊಲೊನಿಯಂ ಅನ್ನು ಅನ್ವೇಷಣೆ ಮಾಡಿದ ಮೇಡಂ ಕ್ಯೂರಿ ಅವರ ಜನ್ಮದಿನವೂ ಆಗಿದೆ. ವೈದ್ಯಕೀಯ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಕಾಯಿಲೆ ಕ್ಯಾನ್ಸರ್. ಒಂದು ಕಾಲದಲ್ಲಿ ಎಲ್ಲೋ ಅಲ್ಲೊಂದು ಇಲ್ಲೊಂದು ಕ್ಯಾನ್ಸರ್ ರೋಗಿಯ ಹೆಸರು ಕೇಳುತ್ತಿತ್ತು. ಇಂದು ನಮ್ಮ ಅಕ್ಕ ಪಕ್ಕದಲ್ಲಿಯೆ, ಮನೆ ಮನೆಗಳಲ್ಲಿಯೇ ಕಣ್ಣೆದುರೇ ಅಷ್ಟು ಚಟುವಟಿಕೆಯಿಂದ ಓಡಾಡಿಕೊಂಡಿದ್ದವರನ್ನು ಕಳೆದುಕೊಳ್ಳುವ ಅಥವಾ ಚಿಕಿತ್ಸೆಯ ನಂತರ ಗುರುತೇ ಸಿಗದಷ್ಟು ಬದಲಾವಣೆಗೆ ಒಳಪಟ್ಟವ ರನ್ನು ಕಂಡಾಗ ಮನಸ್ಸು ಆತಂಕಗೊಳ್ಳುತ್ತದೆ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಬೆಟ್ಟ ಮಾಡಿಕೊಂಡು ಬದುಕು ಸಾಗಿಸುವ ನಾವು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರ ಮಾನಸಿಕ ಸ್ಥಿತಿಯನ್ನು ಒಮ್ಮೆ ಆಲೋಚಿಸಬೇಕು.

ನಿಜ. ಇಂದಿನ ಜಗತ್ತು ದೊಡ್ಡ ದೊಡ್ಡ ಕೊರತೆಯನ್ನೂ ನೀಗಿಸುವ ಮಟ್ಟಿಗೆ ಬೆಳೆದು ನಿಂತಿದೆ. ಮೂಲಭೂತ ಅವಶ್ಯಕತೆಗಳು ಸಮಾಜದ ಅತ್ಯಂತ ಕೆಳಸ್ತರಕ್ಕೂ ತಲುಪುವಷ್ಟು ಬೆಳವಣಿಗೆ ಆಗಿದೆ. ಇದು ಅಪೇಕ್ಷಣೀಯವೂ ಹೌದು. ಆದರೆ ದಿನದಿಂದ ದಿನಕ್ಕೆ ಚಿತ್ರ ವಿಚಿತ್ರವಾದ, ಕಂಡು ಕೇಳರಿಯದ ಕೆಲವು ಆರೋಗ್ಯ ಸಮಸ್ಯೆಗಳು ನಾಗರಿಕ ಸಮಾಜದ ನಿದ್ದೆಗೆಡಿಸುತ್ತಿರುವುದು ಸತ್ಯ ವಿಚಾರ. ಅದರಲ್ಲಿಯೂ ಕ್ಯಾನ್ಸರ್ ಎಂದರೆ ಸಾವು ಶತಸ್ಸಿದ್ಧ ಎಂಬ ಭಾವನೆ ನಮ್ಮ ಜನಮಾನಸದಲ್ಲಿ ಬೇರೂರಿದೆ. ಆದರೆ ವೈದ್ಯ ಜಗತ್ತು ಆ ನಂಬಿಕೆಯನ್ನು ಸುಳ್ಳಾಗಿಸುವ ಯತ್ನದಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಸಾಗುತ್ತಿದೆ. ಕ್ಯಾನ್ಸರ್‌ಗೆ ಕಾರಣವಾಗುವ ಜೀವನ ಶೈಲಿ, ಹಾಗೂ ಸಮಸ್ಯೆಗಳ ಪೂರ್ಣ ಚಿತ್ರಣವನ್ನು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಮೂಲಕ ಜಗತ್ತಿನ ಅರಿವನ್ನು ಹೆಚ್ಚಿಸುವಲ್ಲಿ ಪ್ರಯತ್ನ ಪಡುತ್ತಿದೆ. ಆದರೂ ಕ್ಯಾನ್ಸರ್ ರೋಗಿಗಳ ದೈಹಿಕ ಸ್ಥಿತಿ ಅವರನ್ನು ಕಂಗೆಡೆಸಿ ಹೈರಾಣಾಗಿಸುತ್ತದೆ. ಅತ್ಯಾಧುನಿಕ ಚಿಕಿತ್ಸಾ ಕ್ರಮಗಳು ಅವರನ್ನು ಸಾವಿನಿಂದ ದೂರ ಮಾಡಿವೆ, ಮಾಡುತ್ತಿವೆ. ಆದರೆ ಮಾನಸಿಕ ಸ್ಥಿತಿಯನ್ನಂತೂ ಅಯೋಮಯವಾಗಿಸುತ್ತದೆ. ಬದುಕಿನ ಭರವಸೆಯನ್ನು, ಉತ್ಸಾಹವನ್ನು ಕಿತ್ತುಕೊಂಡು ಒಂದು ರೀತಿಯಲ್ಲಿ ಜೀವಂತ ಶವದಂತೆ ಬದುಕುವ ಬದುಕು ಕ್ಯಾನ್ಸರ್ ರೋಗಿಗಳದ್ದು!

ಕಾರಣ ಹುಡುಕಲು ಹೊರಟರೆ ಒಬ್ಬೊಬ್ಬರದ್ದು ಒಂದೊAದು ಸಮಸ್ಯೆ. ಮಾನಸಿಕವಾಗಿ ಗಟ್ಟಿಗರಾಗಿ ಜೀವನದ ವಾಸ್ತವತೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡುವವರಾದರೆ ಅವರ ಮೇಲೆ ಕ್ಯಾನ್ಸರ್ ಬಹುದೊಡ್ಡ ಪರಿಣಾಮ ಬೀರಲಾರದು. ಆದರೆ ಬಣ್ಣದ ಬದುಕಿನ ಕನಸನ್ನು ಹೊತ್ತ ಸೂಕ್ಷö್ಮ ಮನಸ್ಸಿನವರಿಗೆ ಕ್ಯಾನ್ಸರ್ ಜೊತೆಗೆ ಬದುಕೆಂಬುದು ಬಿಸಿ ತುಪ್ಪವೇ ಸರಿ. ಚಿಕಿತ್ಸಾ ಹಂತದಲ್ಲಿ ರೋಗಿಯ ದೈಹಿಕ ಆರೋಗ್ಯದ ಮೇಲಾಗುವ ಪರಿಣಾಮವನ್ನು ಸುಪ್ತ ಮನಸ್ಸು ಸ್ವೀಕರಿಸಲಾರದು. ಕೀಮೋಥೆರಪಿಯಿಂದ ಉಂಟಾಗುವ ಕೂದಲು ಉದುರುವಿಕೆ, ಆಯಾಸ ಅವರಲ್ಲಿ ಬದುಕುವ ಉತ್ಸಾಹವನ್ನು ಬತ್ತಿಸಿಬಿಡುತ್ತದೆ. ಕ್ಯಾನ್ಸರ್ ಇರುವ ಹಂತಕ್ಕೆ ಅನುಗುಣವಾಗಿ ವರ್ಷಗಟ್ಟಲೆ ನಡೆಯುವ ಚಿಕಿತ್ಸೆಗೆ ನಡೆಯುವ ಖರ್ಚು ವೆಚ್ಚ, ಶ್ರಮ, ಮನೆಯವರು ಅನುಭವಿಸುವ ತೊಂದರೆ, ಬಂಧು ಬಳಗದವರ ಅಳಲು, ಸಮಾಜದ ನಡೆ ನುಡಿಗಳು ಅವರನ್ನು ಮೇಲಿಂದ ಮೇಲೆ ಆಘಾತಕ್ಕೆ ಒಳಪಡಿಸುತ್ತದೆ. ಹಾಗಾದರೆ ಮತ್ತೆ ಅವರನ್ನು ಬದುಕಿನತ್ತ ಸೆಳೆಯುವ ಸೆಲೆ ಯಾವುದು ? ಅದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

ಆರೋಗ್ಯದ ಬಗೆಗೆ ಎಷ್ಟೇ ಜಾಗೃತೆ ವಹಿಸಿದರೂ ಆಡುವ ಮಕ್ಕಳಿಂದ ಹಿಡಿದು ಹಿರಿಯರೂ ಒಂದಲ್ಲ ಒಂದು ವಿಧದ ಕ್ಯಾನ್ಸರ್‌ಗೆ ಒಳಗಾಗುತ್ತಿರು ವುದು ನಿಜಕ್ಕೂ ದುರಂತ. ಸಾಮಾನ್ಯ ಶೀತ ಜ್ವರದಂತೆಯೇ ಹಬ್ಬುತ್ತಿರುವ ಈ ಕಾಯಿಲೆಗೆ ಕಾರಣ ನಮ್ಮ ಜೀವನ ಶೈಲಿಯಾಗಿರಬಹುದು. ಇದಕ್ಕೂ ಮೀರಿ ಅನುವಂಶೀಯತೆಯAತಹ ಬೇರೆಯೇ ಕಾರಣಗಳೂ ಕೂಡ ಇದರ ಮುಷ್ಟಿಯಲ್ಲಿ ಸಿಕ್ಕಿ ನರಳುವಂತೆ ಮಾಡಿರಬಹುದು. ಇಂತಹ ಭಯಾನಕ ಕೂಪಕ್ಕೆ ಬಿದ್ದ ಜೀವ, ಜೀವನ ಪರ್ಯಂತ ಇದೊಂದೇ ಕಾರಣಕ್ಕೆ ನರಳಿ ನರಳಿ ಬದುಕಬೇಕೆ ? ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳ ಬೇಕಾಗಿರುವುದು ಇಲ್ಲಿ. ತನ್ನಂತೆಯೇ ಬದುಕಿ ಬಾಳಬೇಕಾಗಿರೋ ಜೀವ ಹೇಗೇಗೋ ಬದುಕುವುದನ್ನು ನೋಡಿಯೂ ಅದರ ಅಳಿವು ಉಳಿವಿನಲ್ಲಿ ತನ್ನ ಪಾತ್ರವನ್ನು ಅರ್ಥೈಸಿಕೊಂಡು ನಡೆದುಕೊಳ್ಳುವುದಿದೆಯಲ್ಲಾ ಅದೇ ನಿಜವಾದ ಮಾನವೀಯತೆ. ಇಲ್ಲಿ ಕ್ಯಾನ್ಸರ್ ರೋಗಿಗಳಿಗೆ ಬೇಕಾಗಿರುವುದು ಸಮಾಜದ ಅನುಕಂಪ ಅಥವಾ ಕರುಣೆಯಲ್ಲ; ಅಂತಃಕರಣ ತುಂಬಿದ ಒಲವು, ಸ್ನೇಹಪೂರ್ವಕ ನಡವಳಿಕೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸಪೂರ್ವಕ ಸ್ನೇಹ.

ವೈದ್ಯರಿಂದ ಹಿಡಿದು ರೋಗಿಗಳೊಂದಿಗೆ ಒಡನಾಡುವ ಪ್ರತಿಯೊಬ್ಬರೂ ಕೂಡ ಈ ವಿಚಾರದಲ್ಲಿ ವಿಶಾಲ ಹೃದಯಿಗಳಾಗಿಯೇ ನಡೆದುಕೊಳ್ಳಬೇಕು. ಅವರನ್ನೂ ಕೂಡ ಸಹಜವಾಗಿ ನಡೆಸಿಕೊಂಡಲ್ಲಿ ‘ಓಹ್ ಇದರಲ್ಲೇನೂ ವಿಶೇಷವಿಲ್ಲ' ಎಂಬ ಮನೋಭಾವ ಅವರಲ್ಲಿ ಮೂಡಿ ಕಹಿ ವಿಚಾರಗಳಿಗೆ ಪ್ರಾಶಸ್ತö್ಯ ನೀಡದೆ ಸಹಜ ಸುಂದರ ಬದುಕನ್ನು ಅವರು ಕಟ್ಟಿಕೊಳ್ಳಬಲ್ಲರು. ಎಷ್ಟೋ ಜನ ಸೆಲೆಬ್ರಿಟಿಗಳೂ, ಸಿನಿಮಾ, ಕ್ರಿಕೆಟ್‌ತಾರೆಯರೂ ತಮ್ಮ ಖ್ಯಾತಿಯ ಉತ್ತುಂಗದ ದಿನಗಳಲ್ಲಿದ್ದಾಗಲೇ ಈ ಭಯಾನಕ ಸಮಸ್ಯೆಗೆ ಸಿಲುಕಿ ಕತ್ತಲ ಜಗತ್ತಿಗೆ ಸರಿದವರು ನಮ್ಮೊಂದಿಗಿದ್ದಾರೆ. ಕಾಯಿಲೆಯನ್ನು ಜಯಿಸಿ ಮತ್ತೆ ಮೊದಲಿನ ಕಾರ್ಯಕ್ಷೇತ್ರಗಳಲ್ಲಿ ಆಸಕ್ತಿ ತೋರುತ್ತ ಸಾವಿಗಿಂತ ಬದುಕು ದೊಡ್ಡದು ಎಂಬುದನ್ನು ಸಾಬೀತು ಪಡಿಸಿದವರೂ ಇದ್ದಾರೆ. ಇವರು ನಮಗೆ ಆದರ್ಶಪ್ರಾಯರು.

ಯಾರೂ ಕೂಡ ಹುಟ್ಟುವಾಗಲೇ ವರವನ್ನು ಪಡೆದು ಬದುಕು ರೂಪಿಸಿಕೊಂಡವರಲ್ಲ. ಸಿಕ್ಕ ಬದುಕು, ಬಂದ ಬಳುವಳಿಗಳನ್ನು ಸಮರ್ಥವಾಗಿ ನಿಭಾಯಿಸುವ ದಿಟ್ಟ ವ್ಯಕ್ತಿತ್ವವನ್ನು ನಾವೇ ಸಿದ್ಧಿಮಾಡಿಕೊಳ್ಳ ಬೇಕು. ಕ್ಯಾನ್ಸರ್ ಬಾರದಂತೆ ನಿಗಾ ವಹಿಸುವುದು ಮೊದಲ ಆದ್ಯತೆ. ಕಾಯಿಲೆ ಬಂದ ನಂತರದ ಬದುಕನ್ನು ಎದುರಿಸಲು ಮಾನಸಿಕವಾಗಿ ಯುದ್ಧರಂಗದಲ್ಲಿ ಜಯಿಸುವ ವೀರತ್ವಗುಣವನ್ನು ಸಿದ್ಧಿಸಿಕೊಳ್ಳುವುದು ಎರಡನೆಯದು. ಇದಕ್ಕಾಗಿ ದೇವತಾ ಸ್ವರೂಪಿಗಳಾದ ವೈದ್ಯ ತಂಡ ಟೊಂಕ ಕಟ್ಟಿ ನಿಲ್ಲಬೇಕು. ಹಣವಿರುವವರು ಜೀವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಗಳಾಗುವರು. ನಾನೇನ ಮಾಡಲಿ ಬಡವನಯ್ಯ ? ಎಂಬAತೆ ಕ್ಯಾನ್ಸರ್ ಚಿಕಿತ್ಸೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡು ವೈದ್ಯಕೀಯ ಸೇವೆ ಪೂರೈಕೆಯಾಗುವ ಭರವಸೆ ಶ್ರೀಸಾಮಾನ್ಯನಿಗೆ ಲಭಿಸುವಂತಾಗಬೇಕು. ಜನರಲ್ಲಿ ಅಡಗಿರುವ ಅನವಶ್ಯಕ ಚಿಂತೆ, ತಪ್ಪು ಕಲ್ಪನೆಗಳಿಗೊಂದು ಪೂರ್ಣ ವಿರಾಮ ಈ ಮೂಲಕ ಸಿಗುವಂತಾಗುತ್ತದೆ. ಕ್ಯಾನ್ಸರ್ ಭಯವನ್ನು ತೊಲಗಿಸೋಣ. ಬದುಕಿನ ಆನಂದವನ್ನು ಸವಿಯೋಣ.

-ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,

ಸೈಂಟ್ ಆನ್ಸ್ ಪದವಿ ಕಾಲೇಜು,

ವೀರಾಜಪೇಟೆ.