ಈಗಂತೂ ವರ್ಷದಲ್ಲಿ ಪ್ರತಿ ದಿನವೂ ಒಂದೊAದು ವಿಶೇಷತೆಯಿರು ವುದನ್ನು ಕಾಣುತ್ತೇವೆ. ಫಾದರ್ಸ್ ಡೇ, ಮದರ್ಸ್ ಡೇ, ಪರಿಸರ ದಿನ, ಓಝೋನ್ ದಿನ, ವಿಶ್ವ ನಗುವಿನ ದಿನ, ಪ್ರೇಮ ದಿನ...ಹೀಗೆ ಉಲ್ಲೇಖಿಸುತ್ತಾ ಹೋದಲ್ಲಿ ಪಟ್ಟಿ ದೊಡ್ಡದಾಗಿಯೇ ಬೆಳೆಯುತ್ತಾ ಹೋಗುತ್ತದೆ. ‘ದಿನದ ಮಹತ್ವ'ದ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವ ಸಾಧ್ಯತೆಯೂ ಕಡಿಮೆ ಇದೆ. ಇವುಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದರೆ ಸಮಾಜವನ್ನು ಹಲವು ವಿಷಯಗಳಲ್ಲಿ ಸುಧಾರಿಸುವ ಪ್ರಯತ್ನವಂತೂ ನಡೆಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಹೀಗೆ ಇಂದು ಸಹ ಒಂದು ವಿಶೇಷ ದಿನ. ಅದನ್ನು ತಿಳಿಯುವ ಮೊದಲು ಈ ಪದ್ಯದ ಸಾಲುಗಳನ್ನು ಗಮನಿಸೋಣ...

"ಕೂಸು ಇದ್ದ ಮನೆಗ ಬೀಸಣಿಗೆ ಯಾತಕ

ಕೂಸು ಕಂದಯ್ಯ ಒಳಹೊರಗ

ಕೂಸು ಕಂದಯ್ಯ ಒಳಹೊರಗ

ಆಡಿದರ ಬೀಸಣಿಗೆ ಗಾಳಿ ಸುಳಿದಾವ"

ಜನಪದರು ಸೃಷ್ಟಿಸಿದ ಅದ್ಭುತ ಪದಗಳ ಸಾಲನ್ನು ನೋಡಿದಾಗ ಇದನ್ನು ಇಷ್ಟ ಪಡದ ಮನಸ್ಸುಗಳೇ ಇಲ್ಲ ಎನ್ನಬಹುದು. ಈ ಪದ್ಯದ ಸಾಲಿನಲ್ಲಿ ಒಂದು ಕುಟುಂಬ ಬೆಳೆಯಲು, ಮನೆಗೆ ಪುಟ್ಟ ಕಂದಮ್ಮನ ಅನಿವಾರ್ಯತೆ, ಜೊತೆಗೆ ಮಗುವಿನ ಆಟ ಪಾಠ ಮನೆಯವರ ಮನಕ್ಕೆ ಕೊಡುವ ತಂಪನ್ನು ಕಾಣಬಹುದು.

ಇಂದು "ಶಿಶು ಸಂರಕ್ಷಣಾ ದಿನ". ಪ್ರತಿ ವರ್ಷ ನವೆಂಬರ್ ೭ ನೇ ತಾರೀಕಿನಂದು ಶಿಶು ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ… ಸರ್ವಕಾಲಕ್ಕೂ ಸರ್ವರಿಗೂ ಒಳಿತಾಗುವಂತಹ ಇಂತಹ ದಿನವನ್ನು ಸಾರ್ವಜನಿಕವಾಗಿ ಮನವರಿಕೆ ಮಾಡಿಸುವ ಅಗತ್ಯ ಬಹಳಷ್ಟಿದೆ. ಹಾಗಾದರೆ ಆ ದಿನವನ್ನು ಆಚರಿಸುವ ಔಚಿತ್ಯವಾದರೂ ಏನು ? ಎಂಬುದರ ಬಗ್ಗೆ ನಮ್ಮ ಅರಿವು ಖಾತ್ರಿಪಡಿಸಿಕೊಳ್ಳಬೇಕಾದುದು ಅವಶ್ಯಕ. ‘‘ಶಿಶು’’ ಪÀದವು ಮಾನವರ ಬಹಳ ‘ಎಳೆ ಸಂತತಿ'ಯನ್ನು ಸೂಚಿಸುತ್ತದೆ. ಒಬ್ಬ ಮಾನವನ ಜೀವಿತದ ಪ್ರಾರಂಭದ ಅವಧಿಯನ್ನು "ಶಿಶು’’ ಎಂಬ ಪದದಿಂದ ಕರೆಯಬಹುದು. ಹಸುಗೂಸು, ಕಂದ, ಕೈಗೂಸು, ಹಸುಳೆ ಹೀಗೆ ಬೇರೆ ಬೇರೆ ಪದಗಳು ಇದಕ್ಕೆ ಪೂರಕವಾಗಿವೆ. "ತನ್ನ ಮಗುವನ್ನು ರಕ್ಷಿಸುವ ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ" ಎಂಬ ಒಬ್ಬ ಮಹನೀಯರು ಹೇಳಿದ ಮಾತನ್ನು ಗಮನಿಸಿದಾಗ ಒಂದು ಶಿಶುವನ್ನು ರಕ್ಷಿಸುವ ಜವಾಬ್ದಾರಿಯ ಮಹತ್ವ ಅರಿವಿಗೆ ಬರುತ್ತದೆ.

ಜನಿಸಿದ ಮಗು ಹಲವಾರು ಕಾರಣಗಳಿಂದ ಮರಣ ಹೊಂದುವುದನ್ನು ನೋಡಬಹುದು. ಹಿಂದೆ ಶಿಶು ಮರಣ ಸಂಖ್ಯೆ ಅಧಿಕವಾಗಿತ್ತು . ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡುವಾಗ ಹಲವಾರು ಅಂಶಗಳು ಕಣ್ಮುಂದೆ ಬರುತ್ತವೆ. ಅವಧಿಗೂ ಮುನ್ನ ಜನಿಸಿದ ಮಗು ಸೂಕ್ತ ಚಿಕಿತ್ಸೆ ದೊರೆಯದೆ ಸಾಯುವುದನ್ನು ಕಾಣುತ್ತೇವೆ. ಅತಿ ಚಿಕ್ಕವಯಸ್ಸಿನಲ್ಲೇ ಮದುವೆ ಆಗಿ ಮಗು ಹುಟ್ಟಿದಾಗ ಅದಕ್ಕೆ ದೊರೆಯಬೇಕಾದ ಒಳ್ಳೆಯ ಪೋಷಕಾಂಶಗಳ ಕೊರತೆಯಿಂದಾಗಿಯೂ ಶಿಶು ಮರಣ ಹೊಂದುವುದನ್ನು ಕಾಣುತ್ತೇವೆ . ಕೆಲವೊಮ್ಮೆ ರಕ್ತ ಸಂಬAಧದಲ್ಲಿ ಮದುವೆಯಾದಾಗ ಜನಿಸಿದ ಮಗು ಅಂಗವೈಕಲ್ಯಕ್ಕೆ ಒಳಗಾಗುವುದನ್ನು ನೋಡಿದ್ದೇವೆ .ಇನ್ನು ಅವಿದ್ಯಾವಂತ ತಾಯಿಗೆ ಆರೋಗ್ಯ ರಕ್ಷಣೆಯ ಬಗ್ಗೆ ಅರಿವಿನ ಕೊರತೆಯಿಂದಾದ ಮಗುವಿನ ರಕ್ಷಣೆ ಕಷ್ಟವಾಗಿ ಅಪಾಯದಲ್ಲಿ ಸಿಲುಕಿದ ಸಂದರ್ಭಗಳು ಉಂಟು . ಕಳಪೆ ಆರೋಗ್ಯ ಸೌಲಭ್ಯಗಳ ಕಾರಣದಿಂದಾಗಿಯೂ ಹುಟ್ಟಿದ ಮಕ್ಕಳು ಸಾಯುವುದನ್ನು ನೋಡಬಹುದು. ಇದಲ್ಲದೆ ತನ್ನ ದೇಹಸೌಂದರ್ಯದ ಕಾಳಜಿಗಾಗಿ ಹಾಲುಣಿಸದ ತಾಯಂದಿರು ತಮ್ಮ ಮಕ್ಕಳ ಅಪೌಷ್ಟಿಕತೆಗೆ ಕಾರಣವಾಗುವಂತಹದು ವಿಪರ್ಯಾಸ. ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗಿ ಅನೈತಿಕವಾಗಿ ಹುಟ್ಟಿದ ಶಿಶುವನ್ನು ಯಾರಿಗೂ ಅರಿವಿಲ್ಲದಂತೆ ಮೋರಿಯಲ್ಲಿ ಎಸೆಯುವ ಹಾಗೂ ಅನಾಥಾಲಯಕ್ಕೆ ಸಲ್ಲಿಸುವ ಕ್ರೂರ ಮನಸ್ಸುಗಳನ್ನು ಕಾಣುತ್ತಿದ್ದೇವೆ. ಹೆತ್ತವರು ತಮ್ಮ ತಪ್ಪಿನಿಂದಾಗಿಯೂ ಅಥವಾ ಬದುಕಿನ ಕ್ರೂರ ವಿಧಿಯಾಟಕ್ಕೆ ಬಲಿಯಾಗಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡAತಹ ಶಿಶು ಅನಾಥವಾಗಿ ಬೆಳೆಯುವಂತಹ ಪರಿಸ್ಥಿತಿಯು ನಮ್ಮ ದೇಶದಲ್ಲೇನು ಕಡಿಮೆ ಇಲ್ಲ. ಎಷ್ಟೋ ‘ಶಿಶು ಅತ್ಯಾಚಾರ'ಗಳನ್ನು ಕೂಡ ಸಾಕಷ್ಟು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಕೆಲವರು ಮೂಢನಂಬಿಕೆಯಿAದ ವಾಮಾಚಾರಕ್ಕೆ ಮಕ್ಕಳನ್ನು ದೂಡುವ ಎಷ್ಟೋ ಉದಾಹರಣೆಗಳಿವೆ. ಹೀಗೆ ಹತ್ತು ಹಲವು ಅಂಶಗಳ ಪರಿಗಣನೆಯಿಂದಾಗಿ" ಶಿಶು ಸಂರಕ್ಷಣಾ" ದಿನದ ಮೂಲಕ ಅರಿವನ್ನು ಮೂಡಿಸುವ ಅಗತ್ಯತೆ ಇದ್ದುದರಿಂದಲೇ ಬಹುಶಃ ಈ ಮಹತ್ವದ ದಿನ ಹುಟ್ಟಿಕೊಂಡಿದೆ ಎನ್ನಬಹುದು.

ಶಿಶು ಸಂರಕ್ಷಣಾ ದಿನದ ಇತಿಹಾಸವನ್ನು ಅವಲೋಕಿಸುವು ದಾದರೆ ೧೯೯೦ ರವರೆಗೆ ಪ್ರಪಂಚದಾದ್ಯAತ ಸುಮಾರು ೫ ಮಿಲಿಯನ್ ನವಜಾತ ಮಕ್ಕಳು ಮರಣ ಹೊಂದಿದ ಬಗ್ಗೆ ಉಲ್ಲೇಖವನ್ನು ನೋಡಬಹುದು. ಆದ್ದರಿಂದ ಈ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವ ಮೂಲಕ ಸಾರ್ವಜನಿಕವಾಗಿ ಎಲ್ಲರಲ್ಲೂ ಶಿಶುವನ್ನು ರಕ್ಷಿಸುವ ಕಾಳಜಿಯನ್ನು ಬೆಳೆಸಬೇಕು. ಹಿಂದೆ ಅವಿಭಕ್ತ ಕುಟುಂಬವಿದ್ದಾಗ ಮಕ್ಕಳ ಬೆಳವಣಿಗೆ ಒಂದು ರಕ್ಷಣಾ ಮಾರ್ಗದಲ್ಲಿ ಎಲ್ಲರ ಪ್ರೀತಿಯೊಂದಿಗೆ ಉತ್ತಮ ಬಾಂಧವ್ಯದಲ್ಲಿ ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿತ್ತು. ಆದರೆ ಇತ್ತೀಚೆಗೆ ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಗುವಿನ ಆರೈಕೆಗೆ ಧಕ್ಕೆಯುಂಟಾಗುತ್ತಿರುವುದಲ್ಲದೆ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಕಾಳಜಿಗೆ ಬದಲಾಗಿ ಕೂಸು ಬೆಳೆಯುತ್ತಾ ಸ್ವಾರ್ಥ, ದ್ವೇಷ, ಅಸೂಯೆಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿದೆ. ಸ್ನೇಹಿತರು ಹಾಗೂ ಒಡನಾಡಿಗಳೊಂದಿಗೆ ಆಡಿಕೊಂಡು ಬೆಳೆಯುತ್ತಿದ್ದ ಮಗು ಇತ್ತೀಚೆಗೆ ಮೊಬೈಲ್, ಟ್ಯಾಬ್, ಟಿ.ವಿ. ಮುಂತಾದ ವಸ್ತುಗಳ ಜೊತೆ ನೀರಸವಾಗಿ ಭಾವನೆಗಳಿಲ್ಲದೆ ಬೆಳೆಯುತ್ತಿದೆ. ಇದರ ಗಂಭೀರ ಪರಿಣಾಮದ ಬಗ್ಗೆ ಹೆತ್ತವರು ಫೋಷಕರು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಈ ಚಿಂತನೆಯನ್ನು ವರ್ಷದಲ್ಲಿ ಒಂದು ದಿನ ಮಾತ್ರ ಮಾಡಿದರೆ ಪ್ರಯೋಜನವಿಲ್ಲ. ಬದಲಿಗೆ ಪ್ರತಿ ಮನೆಗಳಲ್ಲಿಯೂ ಹಾಗೂ ಪ್ರತೀ ಮನಗಳಲ್ಲಿಯೂ ಶಿಶುವನ್ನು ರಕ್ಷಿಸುವ ಬಗ್ಗೆ ಕಾಳಜಿ ಜೊತೆಗೆ ಜವಾಬ್ದಾರಿ ಬೇಕಾಗಿದೆ. ಜನನದ ಸಮಯದಲ್ಲಿ ಹಾಗೂ ನಂತರ ಶಿಶು ಆರೈಕೆಯ ಬಗ್ಗೆ ಅರಿವಿನ ಕೊರತೆಯನ್ನು ನೀಗಿಸುವುದು ಹಾಗೂ ಜಾಗೃತಿಯನ್ನು ಇನ್ನೂ ಹೆಚ್ಚಾಗಿ ಮೂಡಿಸಬೇಕಾಗಿದೆ. ಚಿಕ್ಕ ಮಗುವನ್ನು ಅದರ ಪ್ರಮುಖ ಮತ್ತು ದುರ್ಬಲ ಬೆಳವಣಿಗೆಯ ಹಂತದಲ್ಲಿ ಪೋಷಿಸುವುದು ನಿಜಕ್ಕೂ ಒಂದು ಸವಾಲೇ ಸರಿ. ಇದನ್ನು ಹೆತ್ತವರೊಂದಿಗೆ ಆರೋಗ್ಯ ಇಲಾಖೆ ಹಾಗೂ ಸರಕಾರದ ಜವಾಬ್ದಾರಿಯು ಮುಖ್ಯ ಪಾತ್ರ ವಹಿಸುತ್ತದೆ. ಭಾರತದಲ್ಲಿ ಶಿಶು ಮರಣವು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ೨೦೧೮ ರಲ್ಲಿ, ವಿಶ್ವಸಂಸ್ಥೆಯ ಮಕ್ಕಳ ಮರಣದ ವರದಿಯು ಭಾರತದಲ್ಲಿ ೭,೨೧,೦೦೦ ಶಿಶು ಮರಣವನ್ನು ದಾಖಲಿಸಿದ ವರದಿಯೊಂದು ಹೇಳುತ್ತದೆ. ಇದನ್ನೆಲ್ಲ ನೋಡುವಾಗ ಈ ದಿನದಂದು ಶಿಶುವಿಗೆ ಅಗತ್ಯವಿರುವ ವಿವರವಾದ ‘ಆರೈಕೆ ಮತ್ತು ಪೋಷಣೆಯ ಬಗ್ಗೆ' ಅರಿವು ಮೂಡಿಸುವ ಪ್ರಯತ್ನ ಫಲಕಾರಿಯಾಗಲು, ಎಲ್ಲಾ ಮಕ್ಕಳು ಉತ್ತಮ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಮಾತ್ರ ಅರ್ಹರು ಎಂಬ ಅಂಶವನ್ನು ಒತ್ತಿ ಹೇಳುವ ಬಲವಾದ ಅವಶ್ಯಕತೆಯ ಗುರಿಯನ್ನು ಎಲ್ಲರೂ ಒಗ್ಗೂಡಿಸಿ ಕೈಗೊಳ್ಳಬೇಕು. ಶಿಶುವಿನ ಬೆಳವಣಿಗೆ ಕೌಟುಂಬಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಭಾವನಾತ್ಮಕವಾಗಿ ಸದೃಢವಾಗಬೇಕು. ಇದರಲ್ಲಿ ಹೆತ್ತವರ ಜವಾಬ್ದಾರಿ ಎಷ್ಟು ಮುಖ್ಯವೋ ಸಮಾಜದ ಬದ್ಧತೆಯೂ ಅಷ್ಟೆ ಮುಖ್ಯವಾಗಿದೆ.

"ಆಕಾಶಕ್ಕೆ ನಕ್ಷತ್ರಗಳಿರುವಂತೆ, ನಮ್ಮ ಜಗತ್ತಿಗೆ ಮಕ್ಕಳು. ಅವರು ಬೆಳಗಲು ಅರ್ಹರು" ಎಂಬ ಪ್ರಸಿದ್ಧರ ಮಾತು ಅಕ್ಷರಶಃ ನಿಜವೂ ಹೌದು. ಅದನ್ನು ಮನಗಂಡು ‘ಇಂದಿನ ಕೂಸುಗಳೇ ಮುಂದಿನ ಫಲಗಳು, ಶಿಶುವಿನ ರಕ್ಷಣೆ ನಮ್ಮೆಲ್ಲರ ಹೊಣೆ’ ಎನ್ನುತ್ತಾ ಕಾರ್ಯತತ್ಪರರಾಗೋಣ.

-ಮೀರ ಸುಮನ್ ಕ್ಯಾಸ್ತಲಿನ್, ಸಹಶಿಕ್ಷಕಿ

ಸರಕಾರಿ ಪ್ರೌಢಶಾಲೆ, ಹಂಡ್ಲಿ.