ಸುಂಟಿಕೊಪ್ಪ, ನ. ೬: ಹಳ್ಳಿ ತೊರೆದು ಪಟ್ಟಣ ಸೇರಿ ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡು ನಶಿಸುತ್ತಿದೆ ಎಂದು ಕುಶಾಲನಗರದ ಅನುಗ್ರಹ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೋಡಿಕಾನ ವಿಷಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿ ಉಪನ್ಯಾಸದ ನೀಡಿದ ಅವರು ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿತ್ತು. ಹಳ್ಳಿ ಜೀವನ ಸಹಬಾಳ್ವೆ ಮತ್ತು ಕಾಯಕ ಸಂಸ್ಕೃತಿ ಪ್ರಧಾನವಾಗಿತ್ತು. ಒಂದು ಹಂತದಲ್ಲಿ ಬುದ್ಧಿವಂತ ಅವಿದ್ಯಾವಂತರು ಇಂದಿನ ವಿದ್ಯಾವಂತ ದಡ್ಡರಿಗಿಂತ ಎಷ್ಟೋ ಮೇಲೂ ಎಂದು ಹೇಳಿದರು. ಇಂದಿಗೂ ಕೂಡ ಅನೇಕ ಆಧುನಿಕ ರೋಗಗಳಿಗೆ ಜನಪದ ನಾಟಿವೈದ್ಯ ಯಶಸ್ವಿಯಾಗಿ ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು ಗ್ರಾಮೀಣ ಜನಪದ ಸೊಗಡು ಆಕಾಶದಷ್ಟು ವಿಸ್ತರವಾಗಿ ಸಾಗರದಷ್ಟು ಅಳ ಆಗಲವನ್ನು ಹೊಂದಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟನೆಯನ್ನು ಕೊಡಗರಹಳ್ಳಿ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ನೆರವೇರಿಸಿ ಮಾತನಾಡಿ, ಆಂಗ್ಲ ಮಾಧ್ಯಮದ ವ್ಯಾಮೋಹ ಮತ್ತು ಪರಕೀಯರ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಕನ್ನಡದ ಬೆಳವಣಿಗೆ ಕುಂಠಿತವಾಗಿದೆ. ಕೆಲವು ವಿದ್ಯಾವಂತರಿAದ ಕನ್ನಡ ಅಳಿಯುತ್ತಿದ್ದು, ಅವಿದ್ಯಾವಂತರು ಕನ್ನಡವನ್ನು ಉಳಿಸಿ ಬೆಳೆಸಿ ಬಳಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ೭ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಯ್ಯ ಮಾತನಾಡಿ, ಜನಪದ ಅಳಿವು ಮತ್ತು ಸೊಗಸನ್ನು ಅರಿತಾಗ ಕನ್ನಡ ಭಾಷೆಯ ಮಹತ್ವ ಮತ್ತು ಅರ್ಥವಂತಿಕೆ ಅರಿವಾಗುತ್ತದೆ. ಕಾಣದ ಕೈಗಳು ಕನ್ನಡ ಬೆಳವಣಿಗೆಯನ್ನು ಹತ್ತಿಕ್ಕುತ್ತಿದ್ದು ಪ್ರಸ್ತುತ ಸಮಾಜದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬ ಜಿಜ್ಞಾಸೆ ಇದೆ. ಸಮಾಜಕ್ಕೆ ಪೂರಕವಾದುದ್ದನ್ನು ಆಯ್ಕೆ ಮಾಡಬೇಕೆ ಹೊರತು ಮಾರಕವಾಗಬೇಡಿ ಎಂದು ಕಿವಿಮಾತು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಲ್ಯಾಸ್ ಮತ್ತು ಶ್ರೀಶಾ ಅವರು ಕ್ರಮವಾಗಿ ಭಾವಗೀತೆ ಮತ್ತು ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್. ಸೆಬಾಸ್ಟೀನ್, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಕೆ. ಇಂದಿರಾ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಕಸಾಪದ ಸಂಘಟನಾ ಕಾರ್ಯದರ್ಶಿ ಕೆ.ಬಿ. ದೇವಿಪ್ರಸಾದ್, ತಾಲೂಕು ಕಸಾಪ ಸಮಿತಿಯ ಸದಸ್ಯ ಬಿ.ಸಿ.ದಿನೇಶ್, ತಾಲೂಕು ಕಸಾಪದ ಖಜಾಂಜಿ ಉಮೇಶ್, ಸುಂಟಿಕೊಪ್ಪ ಹೋಬಳಿ ಘಟಕದ ಗೌರವ ಕಾರ್ಯದರ್ಶಿಗಳಾದ ಅನಿಲ್ ಮತ್ತು ಲೀಲಾ ಮೇದಪ್ಪ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ನಾಡಗೀತೆ, ಕೆ.ಬಿ.ದೇವಿಪ್ರಸಾದ್ ಸ್ವಾಗತಿಸಿ, ಶಿಕ್ಷಕ ಶಿವಪ್ಪ ಗುರ್ಕಿ ನಿರೂಪಿಸಿ, ತಾಲೂಕು ಕಾರ್ಯದರ್ಶಿ ಟಿ.ವಿ.ಶೈಲಾ ವಂದಿಸಿದರು.