ವೀರಾಜಪೇಟೆ, ಅ. ೩೦: ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಪೂರ್ವಭಾವಿ ಸಭೆ ನ. ೪ ರಂದು ಬೆಳಿಗ್ಗೆ ೧೦-೩೦ಕ್ಕೆ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್ನಲ್ಲಿ ನಡೆಯಲಿದೆ. ಮೂರು ನಾಡಿನ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ಆಗಮಿಸಿ ಸಲಹೆ ಸಹಕಾರ ನೀಡಬೇಕಿದೆ ಎಂದು ಮೂರು ನಾಡಿನ ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವರ್ಷಂಪ್ರತಿ ಪುತ್ತರಿ ಕಳೆದು ಮೂರು ದಿನಗಳಲ್ಲಿ ಇತಿಹಾಸ ಪ್ರಸಿದ್ಧ ಕೈಮುಡಿಕೆ ಪುತ್ತರಿ ಕೋಲ್ ಮಂದ್ ನಡೆಯಲಿದೆ. ಈ ಸಂದರ್ಭದಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಸೇರಿದಂತೆ ಈ ಮೂರು ನಾಡಿಗೆ ಸೇರಿದ ವಿವಿಧ ಊರುಗಳ ತಕ್ಕ ಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಒಂದೆಡೆ ಸೇರಿ ಸಾಂಪ್ರದಾಯಿಕ ಕೋಲ್ ಮಂದ್ ಅನ್ನು ವಿಜೃಂಭಣೆಯಿAದ ನಡೆಸಲಾಗುತ್ತದೆ. ಈ ಸಂದರ್ಭ ಮೂರು ನಾಡಿನವರಿಗೆ ವಿವಿಧ ಪೈಪೋಟಿ ಸೇರಿದಂತೆ ಸಾರ್ವಜನಿಕರಿಗೂ ಮುಕ್ತವಾಗಿ ಪೈಪೋಟಿಯನ್ನು ಏರ್ಪಡಿಸಲಾಗುತ್ತದೆ. ಇದರ ರೂಪುರೇಷೆಗಳನ್ನು ಹಾಕಿಕೊಳ್ಳಲು ಹಾಗೂ ಹಬ್ಬವನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಕುತ್ತ್ ನಾಡ್ ತಕ್ಕರಾದ ಪಂದಿಮಾಡ ಅಚ್ಚಪ್ಪ, ಬೇರಳಿನಾಡ್ ತಕ್ಕರಾದ ಮಳವಂಡ ಭುವೇಶ್ ಸೇರಿದಂತೆ ವಿವಿಧ ಊರುತಕ್ಕರು ಉಪಸ್ಥಿತರಿರುತ್ತಾರೆ.