ಮಡಿಕೇರಿ, ಅ. ೨೫ : ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಮಡಿಕೇರಿಯಲ್ಲಿ ಸ್ವರ್ಗವೇ ಸೃಷ್ಟಿಯಾದಂತ ಸನ್ನಿವೇಶ, ಎತ್ತ ನೋಡಿದರು ಜನವೋ, ಜನ..ಕಗ್ಗತ್ತಲ ನಡುವೆ ಕೃತಕ ಬೆಳಕಿನ ವೈಭವ, ಸಂಭ್ರಮ, ಸಡಗರದೊಂದಿಗೆ ಈ ವರ್ಷದ ನಾಡಹಬ್ಬದ ದಸರಾಕ್ಕೆ ವರ್ಣರಂಜಿತ ತೆರೆ.
ಹೌದು.. ಐತಿಹಾಸಿಕ ಮಡಿಕೇರಿ ದಸರಾಗೆ ದಶಮಂಟಪ ಶೋಭಾಯಾತ್ರೆಯ ವೈಭವದೊಂದಿಗೆ ಮುಕ್ತಾಯದ ಪರದೆಯನ್ನು ಎಳೆಯಲಾಯಿತು. ಕಳೆದ ೧೦ ದಿನಗಳಿಂದ ಮಡಿಕೇರಿಯಲ್ಲಿ ಜನೋತ್ಸವದ ಮೆರುಗು ಕಳೆಕಟ್ಟಿತ್ತು. ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಲರವಗಳ ಮೂಲಕ ಮನರಂಜನೆ ದೊರೆಯುತಿತ್ತು. ದಸರಾದ ಕೊನೆಯ ದಿನವಾದ ವಿಜಯದಶಮಿಯ ಅದ್ದೂರಿತನ ಕಣ್ತುಂಬಿಕೊಳ್ಳಲು ಜಿಲ್ಲೆ ಅಲ್ಲದೆ ವಿವಿಧ ರಾಜ್ಯ, ರಾಷ್ಟçಗಳಿಂದ ಮಡಿಕೇರಿಗೆ ಜನಸಾಗರವೇ ಹರಿದು ಬಂದಿತ್ತು.
ಸ್ವರ್ಗ ಲೋಕ ಸೃಷ್ಟಿ
ಮಂಜಿನ ನಗರಿ ಮಡಿಕೇರಿ ಅಕ್ಷರಶಃ ಸ್ವರ್ಗಲೋಕದಂತೆ ಭಾಸವಾಗುತಿತ್ತು. ಸೂರ್ಯ ಮರೆಯಾಗಿ ಬಾನಂಗಳದಲ್ಲಿ ಕಾರ್ಮೋಡ ಆವರಿಸಿ, ನಕ್ಷತ್ರಗಳು ಮಿರಮಿರ ಮಿಂಚುವ ಹೊತ್ತಿನಲ್ಲಿ ಭೂಲೋಕದಲ್ಲಿ ಹೊಸ ಲೋಕ ಉದಯವಾಗಿತ್ತು. ದಶಮಂಟಪಗಳಲ್ಲಿ ಅಳವಡಿಸಲಾಗಿದ್ದ ಬೆಳಕಿನ ಚಿತ್ತಾರ ಬಾನಂಗಳದಲ್ಲಿ ದೃಶ್ಯಕಾವ್ಯ ಬರೆಯುವ ರೀತಿಯಲ್ಲಿ ಕಂಗೊಳಿಸುತಿತ್ತು.
ಅಲ್ಲದೆ ನಗರದಲ್ಲಿ ಅಳವಡಿಸಲಾಗಿದ್ದ ಲೈಟಿಂಗ್ಗಳಿAದ ನಗರದಲ್ಲಿ ಮತ್ತಷ್ಟು ಕಳೆಕಟ್ಟಿತ್ತು. ದೇವಾಲಯಗಳು ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದವು.
ಬೆಳಗ್ಗಿನಿಂದಲೇ ಜನಸಾಗರ
ದಸರಾದ ಕೊನೆ ದಿನ ವಿಜಯದಶಮಿಯಂದು ಮೈಸೂರು ದಸರಾವನ್ನು ಮುಗಿಸಿಕೊಂಡು ಸಾಗರೋಪಾದಿಯಲ್ಲಿ ಜನರು ಸಂಜೆ ಹೊತ್ತಿನಲ್ಲಿ ಮಡಿಕೇರಿಗೆ ಬಂದರು.
ಬೆಳಿಗ್ಗಿನಿಂದಲೇ ಮಡಿಕೇರಿಯಲ್ಲಿ ಜನದಟ್ಟಣೆ ಸೃಷ್ಟಿಯಾಗಿತ್ತು. ಹೊತ್ತು ಕಳೆದರೂ ಜನಸಂಖ್ಯೆ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಸೂರ್ಯ ಉದಯವಾಗುವ ತನಕವೂ ಜನಜಂಗುಳಿ ನಗರದಲ್ಲಿತ್ತು.
ಮಧ್ಯಾಹ್ನ ೩ ಗಂಟೆಯ ಬಳಿಕ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ಲಘು ವಾಹನ, ದಸರಾ ವೀಕ್ಷಣೆಗೆ ಬರುವವರ ವಾಹನಗಳ ನಿಲುಗಡೆ ನಿಗದಿತ ಸ್ಥಳವನ್ನು ಗುರುತಿಸಲಾಗಿತ್ತು. ನಗರದ ರಸ್ತೆಗಳ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ಪೊಲೀಸರು ಮಡಿಕೇರಿ ಪ್ರವೇಶವಾಗುವ ಜಾಗಗಳಲ್ಲಿ ನಾಖಾಬಂಧಿ ಹಾಕಿ ವಾಹನಗಳ ನಗರ ಪ್ರವೇಶವನ್ನು ತಡೆದರು.
ರಾತ್ರಿ ವೇಳೆಗೆ ಜನರ ಸಂಖ್ಯೆ ನಿರೀಕ್ಷೆಗೂ ಹೆಚ್ಚು ಕಂಡುಬAತು. ಇದರಿಂದ ನಡೆದಾಡಲು ಪರದಾಡಬೇಕಾಯಿತು. ನಗರದ ಮುಖ್ಯರಸ್ತೆಗಳಲ್ಲಿ ಕಿಕ್ಕಿರಿದು ಸೇರಿದ್ದ ಜನರು ಶಿಳ್ಳೆ, ಕೇಕೆ ಹಾಕುತ್ತ ದಸರಾ ಕಣ್ತುಂಬಿಕೊAಡರು. ರಾಜಾಸೀಟ್ ರಸ್ತೆಯಲ್ಲಂತೂ ಜನರು ತುಂಬಿತುಳುಕುತ್ತಿದ್ದರು.
ಬೀದಿ ಬದಿಗಳಲ್ಲಿ ನಿರ್ಮಾಣಗೊಂಡಿದ್ದ ಅಂಗಡಿಗಳಲ್ಲಿ ವಿವಿಧ ಬಗೆಯ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಬಟ್ಟೆ ಸೇರಿದಂತೆ ಇನ್ನಿತರ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆದರೆ, ಕ್ಯಾಂಟೀನ್, ಹೊಟೇಲ್ಗಳಲ್ಲಿ ಊಟಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.
ಕುಣಿದು ಕುಪ್ಪಳಿಸಿದ ಜನತೆ
ನಿಯಮಿತ ಧ್ವನಿವರ್ಧಕ ಬಳಕೆಯ ಎಚ್ಚರಿಕೆ ನಡುವೆ ಜನತೆ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಪ್ರತಿಮಂಟಪಗಳ ಹಿಂದೆ ಅಳವಡಿಸಿದ್ದ ಧ್ವನಿವರ್ಧಕಗಳ ಅಬ್ಬರ ದಸರಾದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು. ಜನರು ಮಂಟಪದ ಎದುರು ಕುಣಿಯುತ್ತ ಸಾಗಿ ಸಂಭ್ರಮಿಸಿದರು. ನಗರದ ಹೃದಯ ಭಾಗಗಳಲ್ಲಿ ಕಾಲಿಡಲು ಜಾಗವಿಲ್ಲದಂತಾಗಿತ್ತು.
ದಶಮಂಟಪ ಶೋಭಾಯಾತ್ರೆ ವೀಕ್ಷಣೆಗೆ ಕಾವೇರಿ ಕಲಾಕ್ಷೇತ್ರ ಎದುರು ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ಕಟ್ಟಡ ಮೇಲೆ, ರಸ್ತೆ ಬದಿ ನಿಂತು ದೃಶ್ಯವೈಭವವನ್ನು ಜನರು ಸವಿದರು.
ತಾ. ೨೫ರಂದು ಸಂಜೆ ದಶಮಂಟಪ ಸಮಿತಿಗಳು ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ದಸರಾಗೆ ಮುಕ್ತಾಯ ಹೇಳಲಾಯಿತು.
ಸ್ಥಳೀಯರು, ಹೊರಗಿನವರು ಸೇರಿ ಸುಮಾರು ಒಂದು ಲಕ್ಷ ಮಂದಿ ಮಡಿಕೇರಿ ದಸರಾದಲ್ಲಿ ಭಾಗವಹಿಸಿರುವುದಾಗಿ ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.
- ಹೆಚ್.ಜೆ. ರಾಕೇಶ್