ಗೋಣಿಕೊಪ್ಪಲು, ಅ. ೨೫: ಸಂಸ್ಕೃತಿ, ನಾಡು ನುಡಿ, ಆರೋಗ್ಯ, ಪರಿಸರ ಕಾಳಜಿಯೊಂದಿಗೆ ಅನಾವರಣಗೊಂಡ ಸ್ತಬ್ಧಚಿತ್ರಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು.

ನಾಡಹಬ್ಬ ದಸರಾ ಸಮಿತಿ ಆಯೋಜಿಸಿದ್ದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಾಮಾಜಿಕ ಸಂದೇಶ, ಪರಿಸರ ಪ್ರೇಮ, ಆರೋಗ್ಯ, ಶಿಕ್ಷಣ ಬಿಂಬಿಸುವ ಸ್ತಬ್ಧಚಿತ್ರಗಳು ಮೂಡಿಬಂದವು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸ್ತಬ್ಧಚಿತ್ರ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು, ತಾಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ, ನಾಡಹಬ್ಬ ದಸರಾ ಸಮಿತಿಯ ಅಧ್ಯಕ್ಷ ಕಂಜಿತAಡ ಪ್ರವೀಣ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸ್ತಬ್ಧಚಿತ್ರ ಮೆರವಣಿಗೆ ಸಾಗುತ್ತಿದ್ದಂತೆಯೇ ರಸ್ತೆಯ ಇಕ್ಕೆಲಗಳಲ್ಲಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ವೀಕ್ಷಣೆ ಮಾಡಿದರು. ಮೆರವಣಿಗೆ ಮುಂಭಾಗದಲ್ಲಿ ಜಾನಪದ ಕಲಾತಂಡಗಳ ನೃತ್ಯ ಪ್ರದರ್ಶನ, ಗೊಂಬೆ ಕುಣಿತ ಪ್ರದರ್ಶನಗಳು ನಡೆದವು. ಸುಡು ಬಿಸಿಲನ್ನು ಲೆಕ್ಕಿಸದೆ ನಾಗರಿಕರು ಸ್ತಬ್ಧ ಚಿತ್ರವನ್ನು ವೀಕ್ಷಿಸಿದರು.

ಈ ಬಾರಿ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಇಲಾಖೆಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸಾಮಾಜಿಕ ಸಂದೇಶ ಸಾರುವ ೭ ಸ್ತಬ್ಧಚಿತ್ರಗಳು, ಸರ್ಕಾರಿ ಇಲಾಖೆಯ ೬ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಚಿಲಿಪಿಲಿ ಕಲಾ ತಂಡದ ಬೊಂಬೆಯಾಟ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸರ್ವಂ ತಂಡದ ಚಂದ್ರಯಾನ ಕುರಿತು ವಿಕ್ರಂ ಲ್ಯಾಂಡರ್, ಶಿವಶಕ್ತಿ ಸಂದೇಶ ಗಮನ ಸೆಳೆಯಿತು. ತಿತಿಮತಿ ಶ್ರೀರಾಮಮಂದಿರ ಪ್ರಸ್ತುತ ಪಡಿಸಿದ ಸನಾತನ ಧರ್ಮದ ಗುರುಕುಲ ಶಿಕ್ಷಣದ ಕಲಾಕೃತಿ ವಿಶೇಷವಾಗಿ ಮೂಡಿ ಬಂತು. ಸರ್ವಂ ತಂಡದ ಚಂದ್ರಯಾನ -೩ ಜನಾಕರ್ಷಣೆ ಪಡೆಯಿತು. ವಿಕ್ರಂ ಲ್ಯಾಂಡರ್, ಶಿವಶಕ್ತಿ ಸಂದೇಶ ಕಲಾಕೃತಿ ಗಮನ ಸೆಳೆಯಿತು. ಜೆ.ಬಿ.ಪುರುಷರ ಸ್ವಸಹಾಯ ಸಂಘದ ಸ್ತಬ್ಧಚಿತ್ರ ಬುಡಕಟ್ಟು ಜನಾಂಗದ ಸಮಸ್ಯೆಯನ್ನು ಬಿಂಬಿಸಿದವು. ಹುಲ್ಲಿನ ಜೋಪಡಿ, ಭದ್ರತೆ ಇಲ್ಲದ ವಾಸಸ್ಥಳ, ಮೂಲಭೂತ ವ್ಯವಸ್ಥೆಗಳಿಲ್ಲದ ಶಿಕ್ಷಣ ವ್ಯವಸ್ಥೆ ಕುರಿತು ಬೆಳಕು ಚೆಲ್ಲಿತು.

ಭಗತ್ ಸಿಂಗ್ ಯುವಕ ಸಂಘದ ‘ಪಟಾಕಿ ಬಿಟ್ಟಾಕಿ’, ಪರಿಸರ ಪ್ರೇಮಿ ನಿರೂಪಿಸಿದ ಸ್ತಬ್ಧಚಿತ್ರ ‘ಸೈನಿಕ ಮತ್ತು ರೈತ ದೇಶದ ಬೆನ್ನೆಲುಬು’ ಎಂಬ ಸಂದೇಶ ಸಾರಿದವು. ರುದ್ರಬಾಯ್ಸ್ ತಂಡದ ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಕೆಯಲ್ಲಿ ಆಗುತ್ತಿರುವ ಸಮಸ್ಯೆ ಅನಾವರಣ ಮಾಡಿತು. ಹಿಂದೂಸ್ಥಾನ್ ಫ್ರೆಂಡ್ಸ್ ತಂಡದ ‘ಕಲಿತ ಶಿಕ್ಷಣ ಬೆಳಕಾಗಲಿ’ ಎಂಬ ಸಂದೇಶ ಸಾರುವ ಚಿತ್ರ ನಾಗರಿಕರನ್ನು ಆಕರ್ಷಿಸಿತು.

ಇಲಾಖೆ ವತಿಯಿಂದ ಆಯೋಜನೆಗೊಂಡಿದ್ದ ಸ್ತಬ್ಧಚಿತ್ರದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಮಣ್ಣು ಗಿಡಗಳ ಪೋಷಣೆ, ಜೇನುಸಾಕಾಣಿಕೆ, ನೀರು ಸಿಂಪಡಣೆ, ಮಾನವನಿಂದ ಔಷಧಿ ಸಿಂಪಡಣೆ, ಇಲಾಖೆಯ ನೈಜ್ಯತೆಯನ್ನು ಪ್ರತಿಬಿಂಬಿಸಲಾಗಿತ್ತು. ಶಿಕ್ಷಣ ಇಲಾಖೆ ವತಿಯಿಂದ ‘ಹೆಣ್ಣು ಕಲಿತರೆ ಶಿಕ್ಷಣ-ಸಮಾಜ ಬೆಳಗುತ್ತದೆ’ ಎಂಬ ಸಂದೇಶ ವಿಶೇಷ ಕಲಾಕೃತಿಗಳೊಂದಿಗೆ ಗಮನ ಸೆಳೆಯಿತು. ಆರೋಗ್ಯ ಇಲಾಖೆ ವಿವಿಧ ರೋಗಗಳ ತಪಾಸಣೆ, ಆರೋಗ್ಯ ಕಾಳಜಿ ಬಿಂಬಿಸಿತು. ತಾಲೂಕು ಪಂಚಾಯಿತಿ ವತಿಯಿಂದ ಜಲ್‌ಜೀವನ್ ಮಿಷನ್, ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಮಹತ್ವ ಸರ್ಕಾರದ ಮಹತ್ವ ಅಭಿವೃದ್ಧಿ ಪರ ಚಂತನೆ, ಮಹಿಳಾ ಸಬಲೀಕರಣ ಮಾಹಿತಿ ಬಿಂಬಿಸುವ ಸ್ತಬ್ಧಚಿತ್ರಗಳು ಮೂಡಿ ಬಂದವು.

ಮೆರವಣಿಗೆಯ ಉದ್ದಕ್ಕೂ ತಾಲೂಕು ಮಟ್ಟದ ಅಧಿಕಾರಿಗಳಾದ ಇ.ಒ. ಕೊಣಿಯಂಡ ಅಪ್ಪಣ್ಣ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಪ್ರಕಾಶ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್, ಎನ್‌ಆರ್‌ಇಜಿಯ ಸತೀಶ್ ಸೇರಿದಂತೆ ತಾಲೂಕು ಪಂಚಾಯಿತಿಯ ಗುರುರಾಜ್ ಮತ್ತಿತರರು ಸಾಗಿಬಂದರು. ಡಿವೈಎಸ್ಪಿ ಸುಂದರ್‌ರಾಜ್ ಮುಂದಾಳತ್ವದಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಾಡಹಬ್ಬ ದಸರಾ ಸಮಿತಿಯ ಗೌರವ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಪ್ರತಿಕ್ರಿಯಿಸಿ ಸ್ತಬ್ಧಚಿತ್ರಗಳು ಈ ಬಾರಿ ಕಡಿಮೆ ಬಂದಿವೆ. ಸರ್ಕಾರ ವಿಶೇಷವಾಗಿ ಸ್ತಬ್ಧಚಿತ್ರಕ್ಕೆ ಅನುದಾನವನ್ನು ಒದಗಿಸಬೇಕು. ಸ್ತಬ್ಧಚಿತ್ರ ನಿರ್ಮಾಣ ಮಾಡಲು ಸಾಕಷ್ಟು ಹಣ ವ್ಯಯ ಆಗುವುದರಿಂದ ಯಾರೂ ಕೂಡ ಮುಂದೆ ಬರುತ್ತಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು.

ಚಿತ್ರ, ವರದಿ : ಹೆಚ್.ಕೆ. ಜಗದೀಶ್