ಸೋಮವಾರಪೇಟೆ, ಅ. ೨೧: ತಾಲೂಕಿನ ಗುಡ್ಡಗಾಡು ಪ್ರದೇಶವಾಗಿರುವ ಶಾಂತಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರ ಮೊಬೈಲ್ ಸಂವಹನಕ್ಕೆ ನೆಟ್‌ವರ್ಕ್ ಒದಗಿಸುತ್ತಿರುವ ಹರಗದ ಬಿಎಸ್‌ಎನ್‌ಎಸ್ ಟವರ್ ಕೇಂದ್ರದ ಜನರೇಟರ್ ಕಳವಿಗೆ ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಹರಗ ಗ್ರಾಮದಲ್ಲಿರುವ ಬಿಎಸ್‌ಎನ್‌ಎಲ್ ಟವರ್ ಅಳವಡಿಸಿರುವ ಕೇಂದ್ರದಲ್ಲಿ ವಿದ್ಯುತ್ ಸ್ಥಗಿತಗೊಂಡ ಸಂದರ್ಭ, ಮೊಬೈಲ್ ನೆಟ್‌ವರ್ಕ್ ಚಾಲೂ ಆಗಲು ಬಿಎಸ್‌ಎನ್‌ಎಲ್ ಸಂಸ್ಥೆಯಿAದ ಜನರೇಟರ್ ಅಳವಡಿಸಲಾಗಿದ್ದು, ನಿನ್ನೆ ರಾತ್ರಿ ಕೊಠಡಿಯ ಬೀಗವನ್ನು ಒಡೆದು ಒಳನುಗ್ಗಿರುವ ಕಳ್ಳರು, ಜನರೇಟರನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ.

ಕೊಠಡಿಯಿಂದ ಜನರೇಟರನ್ನು ಹೊರಗೆ ತಂದಿದ್ದು, ಈ ಸಂದರ್ಭ ಲಯತಪ್ಪಿ ಒಂದು ಬದಿಗೆ ಮಗುಚಿಕೊಂಡಿದೆ. ಬೃಹತ್ ಗಾತ್ರ ಮತ್ತು ಭಾರೀ ಭಾರವಾಗಿದ್ದ ಹಿನ್ನೆಲೆ ಅದನ್ನು ಮೇಲೆತ್ತಿ ಸಾಗಿಸಲು ಕಳ್ಳರಿಗೆ ಸಾಧ್ಯವಾಗಿಲ್ಲ. ಆದ್ದರಿಂದ ಕೆಳಭಾಗಕ್ಕೆ ಮಗುಚಿಕೊಂಡ ಜನರೇಟರ್‌ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಕಳ್ಳತನದ ಬಗ್ಗೆ ಕೇಂದ್ರದ ನಿರ್ವಾಹಕರು ಪೊಲೀಸ್ ದೂರು ನೀಡಿದ್ದಾರೆ. ಹರಗ ಗ್ರಾಮದಲ್ಲಿರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಟವರ್ ಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರಾದ ಶರಣ್ ಗೌಡ ಅವರು ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.