ಗೋಣಿಕೊಪ್ಪ ವರದಿ, ಅ. ೧೨: ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಸಂಘದ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಮತ್ತು ತಾಂತ್ರಿಕ ಕಾರ್ಯಾಗಾರ ನಡೆಯಿತು.
ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯ ಘೋಷಣೆ ಮಾಡಲಾಯಿತು. ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ ಉದ್ಘಾಟಿಸಿ ಮಾತನಾಡಿ, ರೇಬಿಸ್ ಮಾರಣಾಂತಿಕ ಖಾಯಿಲೆಯಾಗಿದ್ದು, ಪ್ರಾಣಿಗಳಲ್ಲಿ ಹಾಗೂ ಮನುಷ್ಯರಿಗೆ ನಾಯಿ ಕಚ್ಚುವುದರಿಂದ ಹರಡುತ್ತದೆ. ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಲಸಿಕೆಯಿಂದ ಮಾತ್ರ ತಡೆಗಟ್ಟಲು ಅವಕಾಶವಿರುವದರಿಂದ ಸಾಕುನಾಯಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕಿದೆ ಎಂದರು.
ಮಡಿಕೇರಿ ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ. ತಿಮ್ಮಯ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರೇಬಿಸ್ ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ದೇಶದಲ್ಲಿ ವರ್ಷಕ್ಕೆ ೨೦ ಸಾವಿರಕ್ಕೂ ಅಧಿಕ ಜನರು ಮರಣ ಹೊಂದುತ್ತಿದ್ದಾರೆ. ಅಪಾಯಕಾರಿ ಅಂಕಿ ಅಂಶದಿAದ ಆತಂಕವಿದೆ. ಲಸಿಕೆ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಕೆವಿಕೆ ಪಶುವೈದ್ಯ ಡಾ. ಎಸ್.ಸಿ. ಸುರೇಶ್, ಪೊನ್ನಂಪೇಟೆ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶಾಂತೇಶ್, ಶ್ರೀಮಂಗಲ ಪಶು ವೈದ್ಯ ಡಾ. ಗಿರೀಶ್ ಇದ್ದರು.