ಮಡಿಕೇರಿ, ಅ.೧೦ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಕತೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ೨೦೨೩-೨೪ನೇ ಸಾಲಿಗೆ ಸಾಹಿತಿಗಳಾದ ಮೂರ್ನಾಡುವಿನ ಈರಮಂಡ ಹರಿಣಿ ವಿಜಯ್ ಹಾಗೂ ಮಡಿಕೇರಿಯ ಕಟ್ರತನ ಲಲಿತಾ ಅಯ್ಯಣ್ಣ ಅವರುಗಳು ಭಾಜನರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಅವರು; ಗೌರಮ್ಮ

(ಮೊದಲ ಪುಟದಿಂದ) ಅವರ ಹೆಸರಿನಲ್ಲಿ ಅವರ ಪುತ್ರ ದಿ. ಬಿ.ಜಿ. ವಸಂತ್ ಅವರು ಸ್ಥಾಪನೆ ಮಾಡಿರುವ ಪ್ರಶಸ್ತಿಗೆ ಜಿಲ್ಲೆಯ ಮಹಿಳಾ ಲೇಖಕಿಯರಿಂದ ಒಟ್ಟು ಲೇಖಕರು ೧೫ ಪುಸ್ತಕಗಳನ್ನು ಕಳುಹಿಸಿದ್ದರು. ಈ ಪೈಕಿ ಹರಿಣಿ ಅವರ ಅಗ್ನಿಯಾತ್ರೆ ಕಾದಂಬರಿ ಹಾಗೂ ಲಲಿತಾ ಅವರ ಕಡಲಾಳದ ಮುತ್ತುಗಳು ಪುಸ್ತಕಕ್ಕೆ ಸಮಾನ ೬೦ ಅಂಕಗಳು ಬಂದ ಹಿನ್ನೆಲೆಯಲ್ಲಿ ಈರ್ವರಿಗೂ ಪ್ರಶಸ್ತಿಯನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾ. ೨೭ರಂದು ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ ೧.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವದು. ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸಾದ್ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸುವರು. ಕಸಾಪ ಪದಾಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಗೌರಮ್ಮ ದತ್ತಿ ಕಥಾ ಸ್ಪರ್ಧೆಯಲ್ಲಿ ವಿಜೇತರಾಗಿರುವ ಕುಶಾಲನಗರ ಫಾತಿಮಾ ಪ್ರೌಢಶಾಲೆಯ ಕೆ.ಸಿ. ತನ್ಮಯಿ, ಚೆಂಬು ಶಾಲೆಯ ಬಿಂದು, ಮಡಿಕೇರಿ ಸರಕಾರಿ ಪ್ರೌಢಶಾಲೆಯ ಅನುಷಾ ಅವರುಗಳಿಗೆ ಬಹುಮಾನ ವಿತರಣೆ ಮಾಡಲಾಗುವದೆಂದರು.

ಕಥಾ ಸ್ಪರ್ಧೆ ವಿಜೇತರು :ಶಕ್ತಿ ಸ್ಥಾಪಕ ಸಂಪಾದಕ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಅವರ ಪುತ್ರ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕಸಾಪದಲ್ಲಿ ಸ್ಥಾಪಿಸಿರುವ ದತ್ತಿ ಕಥಾ ಸ್ಪರ್ಧೆಯಲ್ಲಿ ಈರಮಂಡ ಹರಿಣಿ ವಿಜಯ್ ಅವರ ಬದುಕು ಅರಿಯುವ ಮುನ್ನ ಕಥೆ ಪ್ರಥಮ ಸ್ಥಾನ ಪಡೆದುಕೊಂಡರೆ, ಸಹನಾ ಕಾಂತಬೈಲು ಅವರ ವಿನುತಾಕ್ಷಿ ದ್ವಿತೀಯ, ಕುಕ್ಕುನೂರು ರೇಷ್ಮ ಮನೋಜ್ ಅವರ ಹೆಜ್ಜೆಗೊಂದು ನೆನಪು ಹಾಗೂ ಡಾ. ವಾಣಿ ಪುಷ್ಪರಾಜ್ ಅವರ ಕಮರಿದ ಕುಸುಮ ಕತೆಗಳು ತೃತೀಯ ಬಹುಮಾನ ಪಡೆದುಕೊಂಡಿವೆ. ತಾ.೧೪ರಂದು ಮಧ್ಯಾಹ್ನ ೨.೩೦ಗಂಟೆಗೆ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವದು. ಕಸಾಪ ಅಧ್ಯಕ್ಷ ಕೇಶವ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ನವೊದಯ ಪ್ರಾಂಶುಪಾಲ ಒ.ಎಂ.ಪAಕಜಾಕ್ಷನ್ ಉದ್ಘಾಟಿಸುವರು. ಗೋಪಾಲಕೃಷ್ಣ ಅವರ ಬಗ್ಗೆ ಹಿರಿಯ ಸಾಹಿತಿ ನಾಗೇಶ್ ಕಾಲೂರು ಉಪನ್ಯಾಸ ನೀಡಲಿದ್ದು, ಅನಂತಶಯನ ಬಹುಮಾನ ವಿತರಣೆ ಮಾಡುವರು. ಅತಿಥಿಗಳಾಗಿ ಉಪನ್ಯಾಸಕ, ಸಾಹಿತಿ ಮಾರುತಿ ದಾಸಣ್ಣನವರ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿರುವರೆಂದು ಮುನೀರ್ ಮಾಹಿತಿ ನೀಡಿದರು.

ಸುವರ್ಣ ಸಂಭ್ರಮ: ಇದರೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟçಕವಿ ಕುವೆಂಪು ಅವರ ಆಶಯಗಳನ್ನು ಆಧರಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗುವದು. ಕರ್ನಾಟಕ ಎಂದು ನಾಮಕರಣ ಮಾಡಿದ ದೇವರಾಜ ಅರಸು ಅವರ ಚಿಂತನೆಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಕೋಶಾಧಿಕಾರಿ ಸಂಪತ್ ಕುಮಾರ್, ನಿರ್ದೇಶಕರುಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಪ್ರೇಂಕುಮಾರ್ ಇದ್ದರು.