ಭಾರತ ಸದಾ ಇಸ್ರೇಲ್ ಪರ ನಿಲ್ಲಲಿದೆ: ಪ್ರಧಾನಿ ಮೋದಿ

ನವದೆಹಲಿ, ಅ. ೧೦: ಹಮಾಸ್ ಉಗ್ರರ ದಾಳಿಯ ನಂತರ ಗಾಜಾದ ಮೇಲೆ ಇಸ್ರೇಲಿ ಪಡೆಗಳ ಭೀಕರ ದಾಳಿಯ ನಡುವೆ, ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ದೇಶದ ಜನರಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ವಿವರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊAಡಿರುವ ಪ್ರಧಾನಿ ಮೋದಿ, ನೆತನ್ಯಾಹು ಅವರ ದೂರವಾಣಿ ಕರೆಗಾಗಿ ಮತ್ತು ಅಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ವಿವರಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್ ಜೊತೆ ದೃಢವಾಗಿ ನಿಂತಿದ್ದಾರೆ. ಭಾರತವು ಭಯೋತ್ಪಾದಕತೆಯನ್ನು ಮತ್ತು ಅದರ ರೂಪಗಳನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಸಾಲ ಯೋಜನೆಗೆ ಹೆಚ್ಚುವರಿ ಅನುದಾನ ಒದಗಿಸಲು ಸಿಎಂ ನಿರ್ದೇಶನ

ಬೆಂಗಳೂರು, ಅ. ೧೦: ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ ಮುಖ್ಯಮಂತ್ರಿಗಳು ಅರಿವು ಸಾಲ ಯೋಜನೆಯಡಿ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಡುವ ಸಾಲದ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಮುಖ್ಯಮಂತ್ರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಂಖ್ಯೆ ಹೆಚ್ಚಳ ಹಾಗೂ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಹೆಚ್ಚಳ ಮಾಡಿರುವುದಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ನಿಗದಿತ ಗುರಿಗೆ ಎದುರಾಗಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಅರ್ಹ ಫಲಾನುಭವಿಗಳ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಅನುದಾನ ಲಭ್ಯತೆಗೆ ಅನುಸಾರವಾಗಿ ಸೌಲಭ್ಯ ವಿತರಿಸುವಂತೆ ಸೂಚಿಸಿದರು.

ಹಬ್ಬ, ಮದುವೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧ: ಸಿಎಂ

ಬೆAಗಳೂರು, ಅ. ೧೧: ಗಣೇಶ ಹಬ್ಬ, ಮದುವೆ ಸಮಾರಂಭ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಮಂಗಳವಾರ ಸಂಬAಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ ಮುಖ್ಯಮಂತ್ರಿ, ದೀಪಾವಳಿ ಸಮೀಪ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ ಎಂದು ತಿಳಿಸಿದರು. ಪಟಾಕಿ ಸಿಡಿಸುವಾಗ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದೆಲ್ಲೆಡೆ ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಲಾಗಿದೆ ಎಂದರು.

‘ಜಾತಿಭೇದ' ಮತ್ತು ‘ಲಿಂಗ ತಾರತಮ್ಯ' ವಿರೋಧಿಸಿ ಸಚಿವೆ ರಾಜೀನಾಮೆ

ಪುದುಚೇರಿ, ಅ. ೧೦: ಪಿತೂರಿ, ಹಣಬಲದ ರಾಜಕೀಯದ ಜೊತೆಗೆ ಜಾತಿಭೇದ ಮತ್ತು ಲಿಂಗ ತಾರತಮ್ಯವನ್ನು ಎದುರಿಸುತ್ತಿರುವುದಾಗಿ ಆರೋಪಿಸಿ ಪುದುಚೇರಿಯ ಏಕೈಕ ಮಹಿಳಾ ಶಾಸಕಿ ಮತ್ತು ಸಚಿವೆ ಎಸ್. ಚಂದಿರಾ ಪ್ರಿಯಾಂಕ ಅವರು ಎಐಎನ್‌ಆರ್‌ಸಿ-ಬಿಜೆಪಿ ಸಮ್ಮಿಶ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ೨೦೨೧ರಲ್ಲಿ ನೆಡುಂಗಾಡು ಶಾಸಕಿ ಚಂದಿರಾ ಪ್ರಿಯಾಂಕ ೪೦ ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಮಂತ್ರಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎನ್. ರಣಗಸಾಮಿ ನೇತೃತ್ವದ ಸಮ್ಮಿಶ್ರ ಸಂಪುಟದಲ್ಲಿ ಅವರಿಗೆ ಸಾರಿಗೆ ಖಾತೆಯನ್ನು ಹಸ್ತಾಂತರಿಸಲಾಗಿತ್ತು. ಪಿತೂರಿಯ ರಾಜಕೀಯವನ್ನು ಜಯಿಸುವುದು ಅಷ್ಟು ಸುಲಭವಲ್ಲ. ಹಣಬಲದ ದೊಡ್ಡ ಭೂತದ ವಿರುದ್ಧ ನಾನು ಹೋರಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ದಾಳಿ ನಡೆಸಿದರೆ ಇಸ್ರೇಲ್ ಒತ್ತೆಯಾಳುಗಳ ಹತ್ಯೆ: ಹಮಾಸ್ ಬೆದರಿಕೆ

ಗಾಜಾಸಿಟಿ, ಅ. ೧೦: ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಬೆದರಿಕೆ ಹಾಕಿದೆ. ಯಾವುದೇ ಎಚ್ಚರಿಕೆ ನೀಡದೇ ನಮ್ಮ ಜನರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗೆ ಪ್ರತಿಯಾಗಿ, ಒತ್ತೆಯಾಳುಗಳಾಗಿರುವ ಇಸ್ರೇಲಿನ ಒಬ್ಬೊಬ್ಬ ನಾಗರಿಕರನ್ನು ಹತ್ಯೆ ಮಾಡಲಾಗುವುದು ಎಂದು ಹಮಾಸ್‌ನ ಸಶಸ್ತç ವಿಭಾಗವಾದ ಎಝೆಡಿನ್ ಅಲ್-ಕಸ್ಸೆಮ್ ಬ್ರಿಗೇಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಮೂರು ದಿನಗಳಿಂದ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಹಮಾಸ್ ಬಂಡುಕೋರರು, ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡಿದ ಬಳಿಕ, ಸೇನಾ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ.