ಸೋಮವಾರಪೇಟೆ, ಅ. ೧೦: ಪ್ರಸಕ್ತ ವರ್ಷದ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಫಸಲು ಸಾಲವನ್ನು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಮನ್ನಾ ಮಾಡಿಸಬೇಕೆಂದು ಕಾಫಿ ಬೆಳೆಗಾರರ ಸಂಘದ ಮೂಲಕ ಶಾಸಕ ಮಂಥರ್ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

ವಾಡಿಕೆ ಮಳೆಯಾಗದ ಹಿನ್ನೆಲೆ ಕಾಫಿ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಬೆಳೆಗಾರರಿಗೆ ಪ್ರಸಕ್ತ ವರ್ಷದ ಫಸಲು ಸಾಲವನ್ನು ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೆಳೆಗಾರರ ಹಿತಕಾಪಾಡುವ ದೃಷ್ಟಿಯಿಂದ ಫಸಲು ಸಾಲವನ್ನು ಮನ್ನಾ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಗಮನ ಸೆಳೆದರು.

ಈಗಾಗಲೇ ತಾಲೂಕಿನಾದ್ಯಂತ ವಾಡಿಕೆ ಮಳೆಯಾಗದೆ ಕಾಫಿ ಫಸಲು ಇಳುವರಿ ಕುಂಠಿತವಾಗಿ ಬೆಳೆಗಾರರಿಗೆ ತುಂಬಾ ನಷ್ಟ ಆಗಿದೆ. ಕಾಫಿ ಉತ್ಪಾದನಾ ವೆಚ್ಚವು ಆದಾಯಕ್ಕಿಂತ ಹೆಚ್ಚಾಗಿದೆ. ಬೆಳೆಗಾರರಿಗೆ ಪ್ರಸಕ್ತ ವರ್ಷದ ಫಸಲು ಸಾಲವನ್ನು ಮರು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದರು. ಸೋಮವಾರಪೇಟೆ ತಾಲೂಕಿನಲ್ಲಿ ವಾಡಿಕೆ ಮಳೆಯಾಗದೆ ಎಲ್ಲಾ ಬೆಳೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಿಸಲು ಕ್ರಮ ವಹಿಸಬೇಕೆಂದರು. ತಾಲೂಕಿನ ಕಂದಾಯ ಇಲಾಖೆಯಲ್ಲಿನ ಲೋಪದೋಷಗಳಿಂದಾಗಿ ರೈತರ ಹಾಗೂ ಕಾಫಿ ಬೆಳೆಗಾರರ ಆಸ್ತಿ ಜಾಗಗಳು ದುರಸ್ತಿಯಾಗದೆ ತೊಂದರೆಯಾಗುತ್ತಿದ್ದು, ಪೋಡಿ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಮಾಡಿಸಿಕೊಡಬೇಕೆಂದು ಇದೇ ಸಂದರ್ಭ ಮನವಿ ಮಾಡಿದರು.

ಬೆಳೆಗಾರರ ಸಂಘದ ಮನವಿ ಆಲಿಸಿದ ಶಾಸಕರು, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರುಗಳಾದ ಸೋಮಶೇಖರ್, ಎಸ್.ಎಂ. ಡಿಸಿಲ್ವಾ, ಯಡದಂಟೆ ಲವ, ತಾಕೇರಿ ಬಸಪ್ಪ, ಬಿ.ಎಂ. ಸುರೇಶ್ ಮತ್ತಿತರರು ಇದ್ದರು.