ಗೋಣಿಕೊಪ್ಪಲು, ಅ.೪ : ಅರಣ್ಯದಂಚಿನ ಸುತ್ತಮುತ್ತಲಿನಲ್ಲಿ ಆಗಿಂದ್ದಾಗಿಯೇ ಕಾಣಿಸಿ ಕೊಳ್ಳುತ್ತಿದ್ದ ಹುಲಿ ಇದೀಗ ನಗರ ಪ್ರದೇಶದ ಭತ್ತದ ಗದ್ದೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿದೆ. ಹುಲಿಯ ಹೆಜ್ಜೆಯನ್ನು ಕಂಡ ಮಾಲೀಕ ಅಂದಿನ ಕೆಲಸವನ್ನು ನಿಲ್ಲಿಸಿ ಮನೆಗೆ ವಾಪಾಸ್ಸಾಗಿರುವ ಘಟನೆ ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದಲ್ಲಿ ನಡೆದಿದೆ.
ಹುದೂರು ಗ್ರಾಮದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರವಿಶಂಕರ್ ಮುಂಜಾನೆಯ ೬.೩೦ರ ಸುಮಾರಿಗೆ ಪೊನ್ನಂಪೇಟೆ - ಹಳ್ಳಿಗಟ್ಟು ಮುಖ್ಯ ರಸ್ತೆಗೆ ಹೊಂದಿಕೊAಡಿರುವ ತಮ್ಮ ಭತ್ತದ ಗದ್ದೆಗೆ ತೆರಳಿದ್ದ ಸಂದರ್ಭ ಹುಲಿ ಹೆಜ್ಜೆ ಗೋಚರಿಸಿದೆ. ಮತ್ತಷ್ಟು ದೂರ ಸಾಗುತ್ತಿದ್ದಂತೆಯೇ ಹುಲಿಯೊಂದು ಭತ್ತದ ಗದ್ದೆಯಲ್ಲಿ ಹಾದು ಹೋಗಿರುವುದು ಖಚಿತವಾಗುತ್ತಿದ್ದಂತೆಯೇ ಮುಂದಕ್ಕೆ ತೆರಳದೆ ಗಾಬರಿಗೊಂಡು ಹಿಂತಿರುಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧನುಗಾಲ ಗ್ರಾಮದಲ್ಲಿ ಹುಲಿಯೊಂದು ಹಸುವನ್ನು ಕೊಂದು ತೆರಳಿದ ಘಟನೆ ನಡೆದಿತ್ತು. ಇದೀಗ ಈ ಭಾಗದಲ್ಲಿ ಹುಲಿಯ ಸಂಚಾರ ಇರಬಹುದೆಂದು ಊಹಿಸಲಾಗಿದೆ.
-ಹೆಚ್.ಕೆ. ಜಗದೀಶ್